ನಾನು ಶಾಸಕನಾದ ಬಳಿಕ ಮುಳವಾಡ ಏತ ನೀರಾವರಿಗೆ ಚಾಲನೆ-ಸಚಿವ ಶಿವಾನಂದ ಪಾಟೀಲ..!

Sat, Dec 27, 2025

ವಿಜಯಪುರ : ಅಖಂಡ ವಿಜಯಪುರ ಜಿಲ್ಲೆಯ ಜನರು ಭೂಮಿ, ಮನೆ, ಬದುಕು ಕಳೆಕೊಂಡರೂ ಕುಡಿಯಲು ನೀರಿಗೂ ಪರದಾಟ ನಡೆಸಿದ್ದೆವು. ಆದರೆ 2004 ರಲ್ಲಿ ನಾನು ಬಸವನಬಾಗೇವಾಡಿ ಕ್ಷೇತ್ರದಿಂದ ಶಾಸಕನಾದ ಬಳಿಕವೇ ಮುಳವಾಡ ಏತ ನೀರಾವರಿ ಯೋಜನೆಗೆ ಚಾಲನೆ ದೊರಕಿದ್ದು ಎಂದು ಜವಳಿ, ಕಬ್ಬು ಅಭಿವೃದ್ಧಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಪಾಟೀಲ ಹೇಳಿದ್ದಾರೆ...


ಹೌದು ಶನಿವಾರ ನಿಡಗುಂದಿ ತಾಲೂಕಿನ ವಂದಾಲ ಗ್ರಾಮದಲ್ಲಿ ರೈಲ್ವೇ ಸ್ಟೇಷನ್ ವರೆಗಿನ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, 1964 ರಲ್ಲೇ ಕೃಷ್ಣಾ ಮೇಲ್ದಂಡೆ ಯೋಜನೆಗೆ ಅಸ್ತು ಎಂದರೂ 2024 ರ ವರೆಗೂ ಕುಡಿಯಲು ನೀರಿಗೂ ಪರದಾಟ ತಪ್ಪಿರಲಿಲ್ಲ. ವಿಜಯಪುರ, ಬಾಗಲಕೋಟೆ ಜಿಲ್ಲೆಯ ಲಕ್ಷಾಂತರ ಜನರು ಹೊಲ, ಮನೆ, ಬದುಕು ಕಳೆದುಕೊಂಡರೂ ಬೊಗಸೆ ನೀರಿಗೆ ಪರದಾಟ ತಪ್ಪಲಿಲ್ಲ. ಆದರೆ ನಮ್ಮ ತ್ಯಾಗದ ನೀರಾವರಿ ಫಲ ರಾಯಚೂರು, ಯಾದಗಿರಿ, ಕಲಬುರಗಿ, ಕೊಪ್ಪಳ ಜಿಲ್ಲೆಗಳ ಜನರಿಗೆ ದಕ್ಕಿ, ಅವರು ಶ್ರೀಮಂತರಾದರು , ಅಂದಿನ ಶಾಸಕರಾಗಿದ್ದ ಹುಜರೆ ಹಾಗೂ ಸುಗಂಧಿ ಮುರಿಗೆಪ್ಪ ಅವರ ಹೋರಾಟದ ಫಲವಾಗಿ ಗುಲಾಟಿ ಸಮಿತಿ ರಚನೆಗೊಂಡು ಕೃಷ್ಣಾ ಯೋಜನೆ ಬಗ್ಗೆ ಗಮನ ಹರಿಸಲಾಯುತು. ಇದಕ್ಕಾಗಿ ಅಖಂಡ ವಿಜಯಪುರ ಜಿಲ್ಲೆಯ ಜನರು ಈ ಇಬ್ಬರು ನಾಯಕರಿಗೆ ಕೃತಜ್ಞರಾಗಿರಬೇಕು ಎಂದರು.


ನಮಗಿಂತ ಹಿಂದಿನ ಜಿಲ್ಲೆಯ ರಾಜಕೀಯ ನಾಯಕರು, ಹಿರಿಯರ ಹೃದಯ ವೈಶಾಲ್ಯತೆ, ಹಿತಾಸಕ್ತಿ ಕೊರತೆಯ ಕಾರಣ ಇಂದಿನ ವರೆಗೂ ನಾವು ಅವಕಾಶ ವಂಚಿತರಾದೆವು. ಆದರೆ ನಮ್ಮ ತಲೆ ಮಾರಿನ ಜಿಲ್ಲೆಯ ರಾಜಕೀಯ ನಾಯಕರಲ್ಲಿ ಏನೆಲ್ಲ ಭಿನ್ನಾಭಿಪ್ರಾಯ ಇದ್ದರೂ ಜಿಲ್ಲೆಯ ಅಭಿವೃದ್ಧಿ ವಿಷಯದಲ್ಲಿ ನಮ್ಮೆಲ್ಲರ ಬದ್ಧತೆ ಏಕರೂಪವಾಗಿದೆ. ಅದರಿಂದಾಗಿಯೇ ಬಸವನಾಡಿನ ನೀರಾವರಿ ಯೋಜನೆಗಳು ಅನುಷ್ಠಾನ ಕಂಡಿವೆ ಎಂದು ವಿವರಿಸಿದರು...

ಜಿಲ್ಲೆಯ ನೀರಾವರಿ ಯೋಜನೆ ಅನುಷ್ಠಾನದ ವಿಷಯದಲ್ಲಿ ಆಡಳಿತ ನಡೆಸಿದ ಎಲ್ಲ ಪಕ್ಷಗಳ, ಸರ್ಕಾರಗಳ ನಿರ್ಲಕ್ಷ್ಯವೂ ಇದೆ. ಕೃಷ್ಣಾ ಯೋಜನೆಯಿಂದ ಕೆಳ ಭಾಗದ ಜಿಲ್ಲೆಯ ಜನರು ಎರಡು ಬೆಳೆಗೆ ನೀರು ಪಡೆದರೂ, ನಮಗೆ ಕುಡಿಯಲು ನೀರು ಕೊಡಿ ಎಂದು ಗೋಗರೆಯುವ ದುಸ್ಥಿತಿ ಇತ್ತು. ಮುಳವಾಡ ಏತ ನೀರಾವರಿ ಯೋಜನೆ ನೆನೆಗೆ ಬಿದ್ದಿದ್ದರೂ ನಾನು ಮೊದಲ ಬಾರಿಗೆ ಬಸವನಬಾಗೇವಾಡಿ ಕ್ಷೇತ್ರದ ಶಾಸಕನಾದ ಮೇಲೆ 2004 ರಲ್ಲಿ 0-10 ಕಿ.ಮೀ. ಕಾಲುವೆ ಕಾಮಗಾರಿಗೆ ಚಾಲನೆ ನೀಡಿ, ಅನುಷ್ಠಾನಕ್ಕೆ ತಂದಿದ್ದು ಎಂಬುದು ನನಗೆ ಸಂತೃಪ್ತಿಯ ಸಂಗತಿ ವಿಜಯಪುರ ಜಿಲ್ಲೆ ಇದೀಗ ನೀರಾವರಿ ಸೌಲಭ್ಯದ ಅವಕಾಶ ಸಿಕ್ಕರೂ ಸಂತ್ರಸ್ತರ ಬದುಕು ಹಸನಾಗಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ತಿಳಿಸಿದರು 

ಕಾರ್ಯಕ್ರಮದಲ್ಲಿ  ಚಿಮ್ಮಲಗಿಯ ಅರಳೆಕಟ್ಟಿ ಹಿರೇಮಠದ ಸಿದ್ದರೇಣುಕ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು , ಎಸ್.ಜಿ.ನಾಗಠಾಣ, ಜಿ.ಎಸ್.ಕಾಮನಕೇರಿ ಬಸನಗೌಡ ನರಸನಗೌಡರ, ರಾಮು ಜಗತಾಪ, ಮಲ್ಲನಗೌಡ ನರಸನಗೌಡರ, ವಂದಾಲ ಗ್ರಾಪಂ.ಅಧ್ಯಕ್ಷ ವಿರೇಶ ಗಣಾಚಾರಿ, ಪ್ರಮೋದ ಕುಲಕರ್ಣಿ, ತಮ್ಮಣ್ಣ ಬಂಡಿವಡ್ಡರ, ಚನ್ನಸಂಗಪ್ಪಗೌಡ ಪಾಟೀಲ, ಗಂಗಾಧರ ರಾಂಪೂರ ಸೇರಿದಂತೆ ಇತರರು ವೇದಿಕೆ ಮೇಲೆ ಉಪಸ್ಥಿತರಿದ್ದರು.

Like our news?