ಖಗೋಳ ಕೌತುಕ : ಇಂದು ಹಗಲು-ರಾತ್ರಿ ಸಮಾನಾವಧಿಯ ವಿಶೇಷ ದಿನ..!

Tue, Mar 21, 2023

ಬ್ರಹ್ಮಾಂಡದಲ್ಲಿ  ಮಾನವನಿಗೆ ಅರಿಯದ  ಎಷ್ಟೋ ಕೌತುಕಗಳು ಇಂದಿಗೂ ಇವೆ.. ಆದರೆ ಇಂದು ಅಂದರೆ  ಮಾರ್ಚ್ 21 ರಂದು ಖಗೋಳದಲ್ಲಿ ಒಂದು ವಿಸ್ಮಯವಾದ ದಿನ ಅದೇನೆಂದರೆ ವಿಷುವತ್ ಸಂಕ್ರಾಂತಿ...



ವಿಷುವತ್ ಸಂಕ್ರಾಂತಿಯನ್ನು ಆಂಗ್ಲ ಭಾಷೆಯಲ್ಲಿ Equinox ಎಂದು ಕರೆಯುತ್ತಾರೆ..ಈ ದಿನದ ವಿಶೇಷ ಏನೆಂದರೆ   ಈ ದಿನ ಭೂಮಿಯ ಮೇಲೆ ಹಗಲು ಹಾಗೂ ರಾತ್ರಿಯ ಅವಧಿ ಸಮನಾಗಿರುತ್ತದೆ. ವರ್ಷಕ್ಕೆ ಎರಡು ಬಾರಿ, ಮಾರ್ಚ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಈ ವಿದ್ಯಮಾನ ಸಂಭವಿಸುತ್ತದೆ..

ಪ್ರತೀ ವರ್ಷ ಭೂಮಿ-ಸೂರ್ಯನ ಬಂಧನದಿಂದ ಸಂಭವಿಸುವ ವಿಷುವತ್ ಸಂಕ್ರಾಂತಿಯಂದು ಸೂರ್ಯನು ನಿಖರವಾಗಿ ಪೂರ್ವ ದಿಕ್ಕಿನಲ್ಲಿ ಉದಯಿಸಿ, ಪಶ್ಚಿಮ ದಿಕ್ಕಿನಲ್ಲಿ ಅಸ್ತಮಿಸುತ್ತಾನೆ. ಈ ದಿನ ಸೂರ್ಯನ ಬೆಳಕು ಭೂಮಿಯ ಸಮಭಾಜಕ ವೃತ್ತದ ಮೇಲೆ ನೇರ ಬೀಳುತ್ತದೆ. ಸೂರ್ಯನು ಉತ್ತರ ದಿಕ್ಕಿನಿಂದ ದಕ್ಷಿಣ ದಿಕ್ಕಿನೆಡೆಗೆ ಚಲಿಸಲು ಪ್ರಾರಂಭಿಸುವುದರಿಂದ, ಉತ್ತರ ಗೋಳಾರ್ಧದಲ್ಲಿ ವಸಂತ ಋತು ಆರಂಭವಾಗುತ್ತದೆ..



ಈ ದಿನ ಸೂರ್ಯನ ಕೇಂದ್ರ ಬಿಂದು ದಿಗಂತದ ಮೇಲೆ 12 ಗಂಟೆಗಳ ಕಾಲ ಮತ್ತು ದಿಗಂತದ ಕೆಳಗೆ 12 ಗಂಟೆಗಳ ಕಾಲ ಇರುತ್ತದೆ..ಕ್ರಾಂತಿವೃತ್ತವು ಖಗೋಳದ ಸಮಭಾಜಕ ವೃತ್ತವನ್ನು  ಎರಡು ಬಿಂದುಗಳಲ್ಲಿ ಛೇದಿಸುತ್ತದೆ. ಈ ಬಿಂದುಗಳೇ ವಿಷುವದ್ಬಿಂದುಗಳು. ಸೂರ್ಯನು ಈ ಬಿಂದುವನ್ನು ಸಂಕ್ರಮಿಸಿ, ಪ್ರತೀ ದಿನ ಆಕಾಶದಲ್ಲಿ ಉತ್ತರದ ಕಡೆ ಚಲಿಸುವುದನ್ನು ನೋಡಬಹುದು ಮತ್ತು ವಿಷುವತ್ ದಿನದಂದು ನಾವಿರುವ ಸ್ಥಳದ ಅಕ್ಷಾಂಶವನ್ನು ಕಂಡು ಹಿಡಿಯಬಹುದು..

ಒಟ್ಟಿನಲ್ಲಿ ಹೇಳುವುದಾದರೆ ನಮ್ಮ ಪೂರ್ವಜರು ಪ್ರಕೃತಿ ಆರಾಧಕರಾಗಿ ಇಂತಹ ಹಲವಾರು ವಿಷಯಗಳ ಬಗ್ಗೆ ಸಾವಿರಾರು ವರ್ಷಗಳ ಹಿಂದೆ ತಾವು ತಿಳಿದುಕೊಂಡು ಮುಂದಿನ ಪೀಳಿಗೆಗೆ ಬರಹದ ಮುಖೇನ ವಿಷಯಗಳನ್ನು ರವಾನಿಸಿದ್ದಾರೆ...



ಆದರೆ ನಾವು ಗಡಿಬಿಡಿಯ ಜೀವನಶೈಲಿಯ ನಡುವೆ ನಮ್ಮ ಪರಿಸರದಲ್ಲಿ ನಡೆಯುವ ವಿಶೇಷ ವಿದ್ಯಮಾನಗಳ  ಗಮನ ನೀಡದಿರುವುದು ನಾವು ದಿನೇ ದಿನೇ ಪ್ರಕೃತಿಯಿಂದ ಎಷ್ಟು ದೂರವಾಗುತ್ತಿದ್ದೇವೆ ಎಂಬುದನ್ನು ತಿಳಿಸುತ್ತದೆ..
ಇನ್ನಾದರೂ ಪ್ರಕೃತಿಯಲ್ಲಿ ನಡೆಯುವ  ವಿಶೇಷ ವಿದ್ಯಮಾನಗಳ ಕಡೆಗೆ  ಗಮನಹರಿಸಿ ತಿಳಿದುಕೊಂಡು ಪ್ರಕೃತಿ ಪ್ರಿಯರಾಗಲು ಪ್ರಯತ್ನಿಸೋಣ  ಮತ್ತು ಮುಂದಿನ ಪೀಳಿಗೆಗೂ ಜ್ಞಾನವನ್ನು ರವಾನಿಸೋಣ...


Article by :- ಲವೀನಾ ಸೋನ್ಸ್...


Like our news?