ಹಿಂದೂಸ್ಥಾನದಲ್ಲಿ 1857 ರ ಸಮಯದಲ್ಲಿ ನಡೆದ ಸ್ವಾತಂತ್ರ ಸಂಗ್ರಾಮದಲ್ಲಿ ಅನೇಕ ಪರಾಕ್ರಮಿಗಳು ಪ್ರಜ್ವಲಿಸಿದರು. ಅಂತಹ ಪರಾಕ್ರಮಿಗಳಲ್ಲಿ ರಣರಾಗಿಣಿಯಾದ ಝಾನ್ಸಿರಾಣಿ ಲಕ್ಷ್ಮೀಬಾಯಿ ನಮಗೆಲ್ಲರಿಗೂ ಆದರ್ಶಪ್ರಾಯಳಾಗಿದ್ದಾಳೆ, ಒಬ್ಬ ಸ್ತ್ರೀಯಾಗಿ ಅತ್ಯಂತ ಚಿಕ್ಕ ವಯಸ್ಸಿನಲ್ಲಿಯೇ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವೀರಮಹಿಳೆ, ಅವಳ ಪರಾಕ್ರಮದ ವೀರಗಾಥೆಯನ್ನು ಅವಳ ಬಲಿದಾನದಿನದಂದು ತಿಳಿದುಕೊಂಡು ನಮ್ಮಲ್ಲಿನ ರಾಷ್ಟ್ರಭಕ್ತಿ ಮತ್ತು ಧರ್ಮಪ್ರೇಮವನ್ನು ಜಾಗೃತಗೊಳಿಸೋಣ.
ಎರಡನೇ ಬಾಜೀರಾವ್ ಪೇಶ್ವೆಯವರ ಸಂಬಂಧಿ ಚಿಮಾಜೀ ಅಪ್ಪಾರವರ ವ್ಯವಸ್ಥಾಪಕರಾಗಿದ್ದ ಮೋರೋಪಂಥ ತಾಂಬೆ ಮತ್ತು ಭಗೀರಥಿ ಬಾಯಿಯವರಿಗೆ 19 ನವೆಂಬರ 1835 ರಂದು ಹೆಣ್ಣು ಮಗುವಿನ ಜನನವಾಯಿತು. ಆ ಮಗುವಿಗೆ ‘ಮಣಿಕರ್ಣಿಕಾ’ ಎಂದು ಹೆಸರಿಟ್ಟರು. ಮೋರೋಪಂಥರು ಅವಳನ್ನು ಪ್ರೀತಿಯಿಂದ ಮನುತಾಯಿ ಎಂದು ಕರೆಯುತ್ತಿದ್ದರು. ಮನುತಾಯಿಯು ನೋಡಲು ತುಂಬಾ ಸುಂದರ ಮತ್ತು ಬುದ್ಧಿವಂತೆಯಾಗಿದ್ದಳು. ಮನುತಾಯಿಗೆ 3-4 ವರ್ಷವಿರುವಾಗಲೇ ಅವಳು ತನ್ನ ತಾಯಿಯನ್ನು ಕಳೆದುಕೊಂಡಳು. ಮುಂದೆ ಅವಳು ಬ್ರಹ್ಮಾವರ್ತಾದ ಎರಡನೇ ಬಾಜೀರಾವ ಪೇಶ್ವೆಯವರ ಆಶ್ರಯದಲ್ಲಿ ಬೆಳೆದಳು.
ಬ್ರಹ್ಮಾವರ್ತಾದಲ್ಲಿ ನಾನಾಸಾಹೇಬ ಪೇಶ್ವೆ ತಮ್ಮ ಬಂಧುಗಳಾದ ರಾವಸಾಹೇಬರೊಂದಿಗೆ ಕತ್ತಿವರಸೆ, ಬಂದೂಕು ಚಲಾಯಿಸುವುದು ಮತ್ತು ಕುದುರೆ ಸವಾರಿಯನ್ನು ಕಲಿಯುತ್ತಿದ್ದರು. ಮನುತಾಯಿಯೂ ಸಹ ಅವರೊಂದಿಗೆ ಎಲ್ಲ ಯುದ್ಧಕಲೆಗಳನ್ನು ಕಲಿತು ಅದರಲ್ಲಿ ನೈಪುಣ್ಯತೆಯನ್ನು ಪಡೆದುಕೊಂಡಳು. ಮನುತಾಯಿ 7 ವರ್ಷದವಳಿದ್ದಾಗಲೇ ಝಾನ್ಸೀ ಸಂಸ್ಥಾನದ ಅಧಿಪತಿ ಗಂಗಾಧರರಾವ ನೆವಾಲಕರರವರೊಂದಿಗೆ ಅವರ ವಿವಾಹವಾಯಿತು. ವಿವಾಹದ ನಂತರ ಮನುತಾಯಿ ಝಾನ್ಸಿರಾಣಿಯಾದಳು. ಮನುತಾಯಿಯನ್ನು ವಿವಾಹದ ನಂತರ ಲಕ್ಷ್ಮೀಬಾಯಿ ಎಂದು ಸಂಭೋಧಿಸಲಾಯಿತು. ರಾಣಿ ಲಕ್ಮೀಬಾಯಿಯು ಒಂದು ಗಂಡು ಮಗುವಿಗೆ ಜನ್ಮನೀಡಿದಳು. ಪುತ್ರನ ಜನನದಿಂದ ಅಧಿಕಾರಕ್ಕೆ ವಾರಸುದಾರ ಸಿಕ್ಕನೆಂದು ಗಂಗಾಧರರಾವ್‌ಗೆ ತುಂಬಾ ಆನಂದವಾಯಿತು. ಆದರೆ ಮಗು 3 ತಿಂಗಳಿರುವಾಗಲೇ ಅಸುನೀಗಿತು. ಪುತ್ರವಿಯೋಗವನ್ನು ಸಹಿಸದೆ ಗಂಗಾಧರ ರಾವ್ ಹಾಸಿಗೆ ಹಿಡಿದರು. ಗಂಗಾಧರ ರಾವ್ ಅವರ ಇಚ್ಛೆಯಂತೆ ವಾರಸುದಾರನಾಗಿ ನೆವಾಳಕರ ವಂಶದ ಆನಂದರಾವನನ್ನು ದತ್ತು ಪಡೆದು ಅವನಿಗೆ ‘ದಾಮೋದಾರರಾವ’ ಎಂದು ಹೆಸರಿಟ್ಟರು. ದತ್ತು ಪಡೆದ ಕೆಲವು ದಿನಗಳಲ್ಲಿಯೇ ಗಂಗಾಧರರಾವ್ ಮರಣಹೊಂದಿದರು. ಪತಿಯ ಮರಣದಿಂದ ರಾಣಿಲಕ್ಮೀಬಾಯಿಯು ತನ್ನ 18 ನೇ ವಯಸ್ಸಿನಲ್ಲಿಯೇ ವಿಧವೆಯಾದಳು.
ಆಂಗ್ಲರು ಹೊರಡಿಸಿದ ಹೊಸ ಆಜ್ಞೆಗನುಸಾರ ರಾಜ್ಯದ ಉತ್ತರಾಧಿಕಾರಿಯಾಗಿ ರಾಜನ ದತ್ತು ಪುತ್ರನಿಗೆ ಮಾನ್ಯತೆ ಇರಲಿಲ್ಲ. ಈ ಆಜ್ಞೆಯ ಬಗ್ಗೆ ರಾಣಿ ಲಕ್ಷ್ಮೀಬಾಯಿಗೆ ತಿಳಿಸಲು ಆಂಗ್ಲ ಅಧಿಕಾರಿ ಮೇಜರ ಎಲಿಸ್ ಭೇಟಿಯಾಗಲು ಬಂದನು. ರಾಣಿಗೆ ಸ್ವಂತ ಮಕ್ಕಳಿಲ್ಲದ ಕಾರಣ ಝಾನ್ಸಿಯನ್ನು ವಶಪಡಿಸಿಕೊಳ್ಳುವುದಾಗಿ ತಿಳಿಸಿದನು. ರಾಣಿಯು ಸಿಂಹಿಣಿಯಂತೆ ಗರ್ಜಿಸುತ್ತಾ “ನನ್ನ ಝಾನ್ಸಿಯನ್ನು ನಾನು ಎಂದಿಗೂ ಕೊಡುವುದಿಲ್ಲ” ಎಂದು ಹೇಳಿದಳು. ಇದನ್ನು ಕೇಳಿದ ಮೇಜರ್ ಎಲಿಸ್ ಭಯಭೀತನಾಗಿ ಬರಿಗೈಯಲ್ಲಿ ಹಿಂದಿರುಗಿದನು.
1857 ರ ಜನವರಿಯಲ್ಲಿ ಪ್ರಾರಂಭಗೊಂಡ ಸ್ವಾತಂತ್ರ ಸಂಗ್ರಾಮವು ಮೇ 10 ನೇ ತಾರೀಖಿನಂದು ಮೀರತ್‌ನಲ್ಲಿ ಕಾಲಿಟ್ಟಿತ್ತು. ಮೀರತ್, ಬರೇಲಿಯು ಕೂಡಲೇ ಆಂಗ್ಲರಿಂದ ಸ್ವತಂತ್ರವಾಯಿತು. ರಾಣಿ ಲಕ್ಮೀಬಾಯಿಯು ಆಂಗ್ಲರ ಸಂಭವನೀಯ ಹಲ್ಲೆಯಿಂದ ಝಾನ್ಸಿಯ ರಕ್ಷಣೆಗಾಗಿ ಸಿದ್ಧತೆಯನ್ನು ಮಾಡತೊಡಗಿದಳು. ಆಂಗ್ಲರೊಂದಿಗಿನ ಯುದ್ಧದಲ್ಲಿ ರಾಣಿಯು ತನ್ನ ದತ್ತು ಪುತ್ರ ದಾಮೋದರನನ್ನು ಬೆನ್ನಿಗೆ ಕಟ್ಟಿಕೊಂಡು ‘ಜಯ, ಜಯ ಶಂಕರ’ ಎಂಬ ಘೋಷಣೆಯೊಂದಿಗೆ ಆಂಗ್ಲ ಸೇನೆಯನ್ನು ಭೇಧಿಸಿ ಮುನ್ನಡೆದಳು. ಈ ಯುದ್ಧದಲ್ಲಿ ತಂದೆ ಮೋರೋಪಂತರು ಆಂಗ್ಲರ ಸೆರೆ ಸಿಕ್ಕು ಅವರನ್ನು ನೇಣಿಗೇರಿಸಲಾಯಿತು.
ಜೂನ್ 16 ರಂದು ಆಂಗ್ಲರ ಸೈನ್ಯವು ಗ್ವಾಲಿಯರ್ ತಲುಪಿತು. ರಾಣಿ ಲಕ್ಷ್ಮೀಬಾಯಿ ಮತ್ತು ಪೇಶ್ವೆಯವರು ಸರ್ ಹ್ಯೂ ರೋಜ್‌ನನ್ನು ಎದುರಿಸಲು ಸಿದ್ಧರಾದರು. ಗ್ವಾಲಿಯರ್‌ನ ಪೂರ್ವ ಭಾಗವನ್ನು ರಕ್ಷಿಸುವ ಸಂಪೂರ್ಣ ಹೊಣೆ ರಾಣಿಯ ಮೇಲಿತ್ತು. ಜೂನ್ 18 ರಂದು ರಾಣೀ ಲಕ್ಷ್ಮೀ ಬಾಯಿಯ ಶೌರ್ಯದಿಂದ ಹತಾಶರಾದ ಆಂಗ್ಲರು ಗ್ವಾಲಿಯರನ್ನು ಎಲ್ಲ ದಿಕ್ಕುಗಳಿಂದ ಒಟ್ಟಿಗೆ ಆಕ್ರಮಿಸಿದರು. ಆಗ ರಾಣಿಯು ಆಂಗ್ಲರಿಗೆ ಶರಣಾಗದೆ ಅವರ ಕಣ್ಗಾವಲನ್ನು ಭೇದಿಸಿ ಹೊರಗೆ ಹೋಗಲು ನಿರ್ಧರಿಸಿದಳು. ಶತ್ರುಗಳ ಸೈನ್ಯವನ್ನು ಭೇದಿಸಿ ಹೊರಹೋಗುವಾಗ ಒಂದು ನೀರಿನ ಪ್ರವಾಹ ನಡುವೆ ಬಂದಿತು. ರಾಣಿಯ ಬಳಿ ಯಾವಾಗಲೂ ಇರುವ ಕುದುರೆ ‘ರಾಜರತ್ನ’ ಇರದ ಕಾರಣ ಮತ್ತೊಂದು ಕುದುರೆಯ ಜೊತೆ ರಾಣಿಯು ಯುದ್ಧಕ್ಕೆ ಇಳಿದಿದ್ದಳು. ಆ ಕುದುರೆಗೆ ನೀರಿನ ಪ್ರವಾಹ ದಾಟಲು ಸಾಧ್ಯವಾಗದೆ ಅಲ್ಲಿಯೇ ಸುತ್ತಲು ಶುರುಮಾಡಿತು. ಮುಂದೇನಾಗಬಹುದೆಂದು ಅರಿತ ರಾಣಿ ತನ್ನನ್ನು ಬೆಂಬತ್ತಿ ಬರುತ್ತಿದ್ದ ಸೈನ್ಯವನ್ನು ಎದುರಿಸಿದಳು. ಆಕೆಗೆ ಬಿದ್ದ ಹೊಡೆತದಿಂದಾಗಿ ರಕ್ತಸಿಕ್ತಳಾಗಿ ಕೆಳಗೆ ಬಿದ್ದಳು. ಪುರುಷರ ವೇಷ ಧರಿಸಿದ್ದ ಕಾರಣ ಸೈನಿಕರಿಗೆ ಅದು ರಾಣಿ ಎಂಬುದು ತಿಳಿಯಲಿಲ್ಲ. ಹಾಗಾಗಿ ಅವಳು ಬಿದ್ದ ತಕ್ಷಣ ಆಂಗ್ಲರು ಹೊರಟು ಹೋದರು. ರಾಣಿಯ ಸೇವಕರು ಅವಳನ್ನು ಸಮೀಪವಿದ್ದ ಗಂಗಾದಾಸರ ಮಠಕ್ಕೆ ಕರೆದುಕೊಂಢು ಹೋದರು ಮತ್ತು ಗಂಗಾಜಲವನ್ನು ನೀಡಿದರು. ತನ್ನ ಶರೀರ ಆಂಗ್ಲರ ಕೈಗೆ ಸಿಗಬಾರದೆಂಬ ಇಚ್ಛೆಯನ್ನು ವ್ಯಕ್ತಪಡಿಸಿ ರಾಣಿಯು ವೀರಮರಣವನ್ನಪ್ಪಿದಳು. ರಾಣಿ ಲಕ್ಷ್ಮೀಬಾಯಿಯ ಶೌರ್ಯವು ನಮಗೆ ಸ್ಪೂರ್ತಿಯನ್ನು ನೀಡಿದೆ. ಇಂತಹ ವೀರಾಂಗನೆ ರಾಣಿಲಕ್ಷ್ಮೀ ಬಾಯಿಯ ಚರಣಗಳಲ್ಲಿ ಬಲಿದಾನದ ನಿಮಿತ್ತ ನಮನಗಳು.
ಶ್ರೀ. ನೀಲಕಂಠ , ವಿಜಯಪುರ
Sign up here to get the latest post directly to your inbox.