ಶ್ರೀ ಕ್ಷೇತ್ರ ಗಾಣಗಾಪುರದ ಮಹಿಮೆ ದತ್ತಾತ್ರೇಯ ನೆಲೆಬೀಡು ನಿಮಗೆಷ್ಟು ಗೊತ್ತು .. BD1News.in#history of dattatrraya

Tue, Oct 02, 2018

ಇದು ಬ್ರಹ್ಮ, ವಿಷ್ಣು,  ಮಹೇಶ್ವರರ ಅವತಾರವಾದ ದತ್ತಾತ್ರೇಯರು ನೆಲೆಸಿರುವ ಪಾವನ ಪುಣ್ಯಕ್ಷೇತ್ರ.ಕಲಬುರಗಿಯ ಅಫ‌ಜಲ್‌ಪುರ ತಾಲೂಕಿನಲ್ಲಿರುವ ಒಂದು ಪವಿತ್ರ  ಧಾರ್ಮಿಕ ಕ್ಷೇತ್ರವೇ ಗಾಣಗಾಪುರ,  ಭೀಮಾ ನದಿಯ  ತಟದಲ್ಲಿ ನೆಲೆನಿಂತಿರುವ ಪೀಠಕ್ಕೆ  ನಿರ್ಗುಣ ಮಠ ಎಂತಲೂ ಕರೆಯುತ್ತಾರೆ

ದೇವಾಲಯವನ್ನು  ಮರಾಠ ವಾಸ್ತುಶಿಲ್ಪವಾದ ನಗರಖಾನಾ ಮಾದರಿಯಲ್ಲಿ ನಿರ್ಮಿಸಲಾಗಿದೆ.  ದೇವಾಲಯದ ಮುಖ್ಯದ್ವಾರ ಪಶ್ಚಿಮಾಭಿಮುಖವಾಗಿದೆ. ವಿಶಾಲವಾದ ಮುಖಮಂಟಪ ಹೊಂದಿದ ಈ ದೇವಾಲಯದ ಗರ್ಭಗೃಹವನ್ನು ಚಿಕ್ಕದಾಗಿ ಎರಡು ಭಾಗಗಳಾಗಿ ವಿಂಗಡಿಸಲಾಗಿದೆ.  ಒಂದು  ಭಾಗದಲ್ಲಿ  ದತ್ತಾತ್ರೇಯರ ವಿಗ್ರಹವಿದೆ. 


ಇನ್ನೊಂದು ಭಾಗದಲ್ಲಿ  ಅವರ ಪಾದುಕೆಗಳಿವೆ.   ಗರ್ಭಗುಡಿ ಅತ್ಯಂತ ಚಿಕ್ಕದಾಗಿದ್ದು ಅದಕ್ಕೆ ಬೆಳ್ಳಿಯ ಬಾಗಿಲುಗಳನ್ನು  ಅಳವಡಿಸಲಾಗಿದೆ. ದರ್ಶನಕ್ಕೆ ಬರುವ ಭಕ್ತರು ಚಿಕ್ಕದಾದ ಬಾಗಿಲಿನ ಮೂಲಕವೇ ದತ್ತಾತ್ರೆಯರ ದರ್ಶನ ಪಡೆಯಬಹುದು. ವಿಶಾಲವಾದ  ಅಶ್ವಥ್‌ ವೃಕ್ಷದ ಅಡಿಯಲ್ಲಿ ಈ ದೇವಾಲಯವನ್ನು  ನಿರ್ಮಿಸಲಾಗಿದೆ.


ದತ್ತಾತ್ರೇಯರ ಇತಿಹಾಸ  

ಹಿಂದೆ ಸಪ್ತಋಷಿಗಳಲ್ಲಿ ಎರಡನೆಯವರಾದ ಅತ್ರಿಮುನಿಗಳು ಸಹ್ಯಾರ್ದಿ ಪರ್ವತ ಶ್ರೇಣಿಯಲ್ಲಿ ಘೋರ ತಪಸ್ಸನಾಚರಿಸುತ್ತಿದ್ದರು.

ಅವರ ತಪಸ್ಸಿಗೆ ಮೆಚ್ಚಿದ  ಬ್ರಹ್ಮ, ವಿಷ್ಣು, ಮಹೇಶ್ವರರು  ಪ್ರತ್ಯಕ್ಷರಾಗಿ  ನಿಮಗೇನು ವರ ಬೇಕು ಎಂದು ಕೇಳಿದಾಗ ಅತ್ರಿ ಮುನಿಗಳು  ನಿಮ್ಮ ಮೂವರ ಗುಣಗಳುಳ್ಳ ಮತ್ತು ಶಕ್ತಿಶಾಲಿಯಾದ ಮಗನನ್ನು ದಯಪಾಲಿಸು ಎಂದು ಕೇಳಿಕೊಂಡರಂತೆ.   ಕೆಲ ದಿನಗಳ ನಂತರ ಅತ್ರಿ ಮುನಿಗಳು ಹಾಗೂ  ಅವರ ಧರ್ಮಪತ್ನಿ ಅನುಸೂಯಾ ದೇವಿಗೆ ಮಗ ಹುಟ್ಟಿದ. ಅವನೇ ದತ್ತಾತ್ರೇಯ ಆತ ಬ್ರಹ್ಮನ ಅವತಾರವಾಗಿದ್ದರಿಂದ ಸೋಮನೆಂದು,  ವಿಷ್ಣುವಿನ ಅವತಾರವಾಗಿದ್ದರಿಂದ  ದತ್ತನೆಂದೂ, ಶಿವನ ಅವತಾರವಾಗಿದ್ದರಿಂದ  ದುರ್ವಾಸನೆಂದೂ ಕರೆಯಲ್ಪಡುತ್ತಾನೆ. ಇನ್ನು  ದತ್ತ  ಶಬ್ದಕ್ಕೆ ಅರ್ಥ ಕೊಟ್ಟಿದ್ದು  ತ್ರಿಮೂರ್ತಿಗಳು ತಮ್ಮನ್ನು ತಾವೇ  ಋಷಿ ದಂಪತಿಗೆ ಪುತ್ರನ ರೂಪದಲ್ಲಿ ಅರ್ಪಿಸಿಕೊಂಡಿದ್ದರಿಂದ ದತ್ತನೆಂದು ಕರೆದರಂತೆ. ಒಬ್ಬನೇ ವ್ಯಕ್ತಿಯಲ್ಲಿ ತ್ರಿಮೂರ್ತಿಗಳು ಇದ್ದುದರಿಂದ ದತ್ತಾತ್ರೇಯ ಎಂದು ಕರೆಯಲಾಯಿತಂತೆ.  ಇವರ ಇನ್ನೊಂದು ಹೆಸರೇ ನರಸಿಂಹ ಸರಸ್ವತಿ ಸ್ವಾಮಿ.

ಭಕ್ತರು ದತ್ತಾತ್ರೇಯರನ್ನು ನಾನಾ ಹೆಸರುಗಳಿಂದ ಕರೆಯುತ್ತಾರೆ. ತ್ರಿಮೂರ್ತಿ ರೂಪಾ ದತ್ತಾತ್ರೇಯ, ತ್ರಿಗುಣಾತೀತ  ದತ್ತಾತ್ರೇಯ, ಅನುಸೂಯಾ ತನಯ ದತ್ತಾತ್ರೇಯ ಎಂದು ಕೆಲವರು ಭಜನೆಯ ಮೂಲಕವೂ ವರ್ಣಿಸುತ್ತಾರೆ. ಇನ್ನು ಕೆಲವರು ಋಷಿ ಅತ್ರಿಯವರ ಪುತ್ರನಾಗಿರುವುದರಿಂದ  ದತ್ತಾತ್ರೆಯರನ್ನು ಅತ್ರೇಯನೆಂದೂ ಕರೆದರೆ, ಇನ್ನು ಕೆಲವರು  ಭಕ್ತವತ್ಸಲ, ಜಾnನಸಾಗರ, ತ್ರಿಲೋಕ ಸಂಚಾರಿ, ಅವಧೂತ, ಪರಬ್ರಹ್ಮ ಸ್ವರೂಪಿ ಅಂತೆಲ್ಲಾ ಕರೆಯುತ್ತಾರೆ.

ಅವಧೂತ ದತ್ತಾತ್ರೆಯರು ತಮ್ಮ ಮಾತಾಪಿತೃಗಳ ಅಪೇಕ್ಷೆಯಂತೆ  ಲೋಕ ಕಲ್ಯಾಣಕ್ಕಾಗಿ ಪ್ರತಿನಿತ್ಯ  ಬೇರೆ ಬೇರೆ  ಕ್ಷೇತ್ರಗಳಲ್ಲಿ ಸಂಚರಿಸುತ್ತಾ, ತನ್ನೆಲ್ಲಾ ಭಕ್ತರನ್ನು ಉದ್ಧಾರ ಮಾಡುತ್ತಿದ್ದರು ಎಂದು ಹೇಳಲಾಗುತ್ತಿದೆ. ಭಕ್ತರ ಕರೆಗೆ ಓಗೊಟ್ಟು  ಗಾಣಗಾಪುರದಲ್ಲಿ 24 ವರ್ಷಗಳ ಕಾಲ ನೆಲೆಸಿದ ಶ್ರೀಗುರು ದತ್ತರು ದಿನಂಪ್ರತಿ ಮಧ್ಯಾಹ್ನ 12 ಗಂಟೆಯ ಸುಮಾರಿಗೆ  ಈ ಊರಲ್ಲಿರುವ  ಐದು ಮನೆಗಳಲ್ಲಿ ಭೀಕ್ಷೆ ಬೇಡುತ್ತಿದ್ದರಂತೆ.  ಇಂದಿಗೂ ಕೂಡ  ಈ ಕ್ಷೇತ್ರದ ನಿವಾಸಿಗಳು  ಸ್ವತಃ  ಗುರುಗಳೇ  ಭಿಕ್ಷೆಗೆ ಬರುತ್ತಾರೆ ಎಂದು ನಂಬಿಕೊಂಡಿದ್ದಾರೆ.   

ಗಾಣಗಾಪುರ, ಭೀಮಾನದಿ ಹಾಗೂ ಅಮರಜ ನದಿಗಳ ಸಂಗಮ ಕ್ಷೇತ್ರವಾಗಿದೆ.  ಇದರಲ್ಲಿ ಸ್ನಾನ ಮಾಡುವುದರಿಂದ ಭಕ್ತಾದಿಗಳ ಇಷ್ಟಾರ್ಥಗಳು ನೆರವೇರುತ್ತವೆ ಎಂಬ ನಂಬಿಕೆಯಿದೆ.


ಇಲ್ಲಿರುವ ಪವಿತ್ರ ಔದುಂಬರ ಮರದ ಕೆಳಗೆ  ಕುಳಿತು ಶ್ರೀಗುರು ಚರಿತ್ರೆಯನ್ನು ಪಾರಾಯಣ  ಮಾಡಲಾಗುತ್ತದೆ.  ಪುರಾಣದ ಪ್ರಕಾರ ಹಿಂದೆ ನರಹರಿ ಎಂಬ ಬ್ರಾಹ್ಮಣ,  ದತ್ತಾತ್ರೇಯರಲ್ಲಿಗೆ  ಬಂದು ತಾನು ನೋವಿನಿಂದ ನರಳುತ್ತಿರುವುದಾಗಿ, ಹೇಗಾದರೂ ಮಾಡಿ  ತಮ್ಮ ಕೃಪೆಯಿಂದ ಅದನ್ನು ವಾಸಿಮಾಡಿ ಎಂದು ಕೇಳಿಕೊಂಡನಂತೆ.  ದತ್ತರು, ಅಲ್ಲಿದ್ದ  ಔದುಂಬರ ಮರದ ಒಂದು ಕೊರಡನ್ನು ಬ್ರಾಹ್ಮಣನಿಗೆ ಕೊಟ್ಟು, ನದಿಗಳ ಸಂಗಮ ಸ್ಥಾನದಲ್ಲಿ ಅದನ್ನು  ನೆಡಲು ಹೇಳಿ,  ದಿನಕ್ಕೆ ಮೂರು ಬಾರಿ ಆ ಮರದ ಕೊರಡಿಗೆ ನೀರು ಹಾಕುವಂತೆ ಆದೇಶಿಸಿದರು.   ಬ್ರಾಹ್ಮಣ ಹಾಗೆಯೇ ಮಾಡಿದ.  ಒಂದು ದಿನ ಗುರುಗಳು ಅವನಲ್ಲಿಗೆ ಹೋಗಿ  ಸಂಗಮದ ಪವಿತ್ರ ನೀರಿನಿಂದ ಅವನಿಗೆ ಹಾಗೂ ಅವನು ನೆಟ್ಟ ಮರದ ಕೊರಡಿಗೆ ಪ್ರೋಕ್ಷಣೆ ಮಾಡಿದರು.  ತಕ್ಷಣ  ಅವನ ನೋವು ವಾಸಿಯಾಯಿತೆಂದು ಹೇಳಲಾಗುತ್ತಿದೆ.  ನಂತರ  ಆ ಬ್ರಾಹ್ಮಣ 8 ಶ್ಲೋಕಗಳನ್ನು ಹೇಳಿ ಗುರುಗಳಿಗೆ ವಂದಿಸಿದ. ಅದೇ ಶ್ಲೋಕಗಳನ್ನು ಈಗಲೂ ಅಲ್ಲಿ ಸಂಧ್ಯಾ ಸಮಯದಲ್ಲಿ  ದೇವಸ್ಥಾನದಲ್ಲಿ ಪಠಿಸಲಾಗುತ್ತಿದೆ.  ದತ್ತ ಜಯಂತಿಯಂದು ಜನಸಾಗರವೇ ಹರಿದು ಬರುವ ಈ ಕ್ಷೇತ್ರ ಅತ್ಯಂತ ಪವಿತ್ರ ಕ್ಷೇತ್ರಗಳಲ್ಲಿ ಒಂದಾಗಿದೆ.

Like our news?