ವಿಶ್ವಮಾನವ ಸಂದೇಶ ಸಾರುವ ಕನಕ ಉದ್ಯಾನವನ . #History of kanakadas

Fri, Aug 10, 2018

ವಿಶೇಷ ವರದಿ: ಮಯೂರ ತಿಳಗೂಳಕರ.

ಹಾವೇರಿ : ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯೇನಾದರೂ ಬಲ್ಲಿರಾ?ಆತ್ಮ ಯಾವ ಕುಲ ಜೀವ ಯಾವ ಕುಲ ತತ್ವೇಂದ್ರಿಯಗಳ ಕುಲ ಪೇಳಿರಯ್ಯ! ಆತ್ಮಾಂತರಾತ್ಮ ನೆಲೆಯಾದಿ ಕೇಶವ. ಆತನೊಲಿದ ಮೇಲೆ ಯಾತರ ಕುಲವಯ್ಯ? ಎಂಬ ಕೀರ್ತನೆ ಮೂಲಕ ಕುಲಕುಲವೆಂದು ಹೊಡೆದಾಡುವ ಧರ್ಮಾಂಧರಿಗೆ ಕುಲದ ನೆಲೆ ಅರಿತು ಬಾಳುವುದು ಹೇಗೆ ಎಂಬುದನ್ನು ಸಾರಿ ಮನೆ ಮಾತಾದವರು ಕನಕದಾಸರು.

ಇಂತಹ ದಾರ್ಶನಿಕರ ಕರ್ಮಭೂಮಿ ಕಾಗಿನೆಲೆ ಮತ್ತು ಜನ್ಮಭೂಮಿ ಬಾಡದಲ್ಲೀಗ ಅಭಿವೃದ್ಧಿಯ ಗಾಳಿ ಬೀಸುತ್ತಿದ್ದು  ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ.ಪ್ರತಿವರ್ಷ ೨ ಲಕ್ಷಕ್ಕೂ ಅಕ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ.

೨೦೦೬ರಲ್ಲಿ ಅಸ್ತಿತ್ವಕ್ಕೆ ಬಂದ ಕಾಗಿನೆಲೆ ಅಭಿವೃದ್ಧಿ ಪ್ರಾಕಾರ ಈ ವರೆಗೆ ನಿರಂತರವಾಗಿ ಹತ್ತು ಹಲವು ಚಟುವಟಿಕೆಗಳನ್ನು ನಡೆಸುತ್ತ ಬಂದಿದೆ. ಕಾಗಿನೆಲೆ ಅಭಿವೃದ್ಧಿ ಪ್ರಾಕಾರದ ವತಿಯಿಂದ ಇಲ್ಲಿ ಕೈಗೊಳ್ಳಲಾದ ಅಭಿವೃದ್ಧಿ ಕಾಮಗಾರಿಗಳು ಇಡೀ ಜಗತ್ತೇ ಕಾಗಿನೆಲೆ ಹಾಗೂ ಬಾಡದತ್ತ ತಿರುಗಿ ನೋಡುವ ಹಾಗೆ ಮಾಡಿವೆ. ಕೋಟ್ಯಂತರ ರೂ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾದ ಯೋಜನೆಗಳು ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿವೆ. ಬಾಡದ ಅರಮನೆಯಲ್ಲಿ ಗೋಡೆಗೆ ಹಾಕಲಾದ ಅವರ ಕೀರ್ತನೆಗಳಂತೂ ಜನರ ಮನ ತಟ್ಟುವಲ್ಲಿ ಯಶಸ್ವಿಯಾಗಿವೆ. ಕಾಗಿನೆಲೆ ಹಾಗೂ ಬಾಡ ಇಂದು ವಿಶ್ವಭೂಪಟದಲ್ಲಿ ಬಾನೆತ್ತರಕ್ಕೆ ಹಾರುತ್ತಿವೆ.


ರಜೆಯಲ್ಲಂತೂ ಪ್ರವಾಸಿಗರಿಗೆ ಹಾಗೂ ಆಸ್ತಿಕರಿಗೆ ಈ ಎರಡೂ ಸ್ಥಳ ಹೇಳಿ ಮಾಡಿಸಿದಂತಿದೆ. ಕನಕರ ಹಾಗೂ ಅವರ ಆರಾಧ್ಯ ದೈವ ಆದಿಕೇಶವನ ದರ್ಶನ ಪಡೆದು ಪುನೀತರಾಗಲು ಇದಕ್ಕಿಂತ ಮತ್ತೊಂದು ಸೂಕ್ತ ಸ್ಥಳವಿಲ್ಲ. ಪೂಜೆ ಮುಗಿಸಿ ಊಟೋಪಚಾರ ನಂತರ ಮುಂದೇನು ಎನ್ನುವ ಚಿಂತೆ ನಿಮಗೆ ಬೇಡ. ಕನಕ ಮಂದಿರದ ಬಳಿ ವಿಶಾಲವಾಗಿ ಮೈದುಂಬಿಕೊಂಡಿರುವ ಕಾಗಿನೆಲೆ ಕೆರೆ ದೋಣಿ ವಿಹಾರಕ್ಕೆ ಸಿದ್ಧಗೊಂಡಿರುತ್ತದೆ.ಕನಿಷ್ಠ  ೨ ಕಿ.ಮೀ.ವರೆಗೂ ಕಣ್ಣು ಹಾಯಿಸಿದಷ್ಟು ನೀರಿನ ತೊರೆಯ ಸಂಭ್ರಮವನ್ನು ದೋಣಿಯಲ್ಲಿ ಪಯಣಿಸುವ ಮಜ ನಿಮಗೆಲ್ಲೂ ಸಿಗದು.

ಕೆರೆ ಗುಂಟ ಹಸಿರು ತೋಟ, ವಿಹಾರದ ವೇಳೆ ಬಗೆ ಬಗೆಯ ಮೀನುಗಳ ದರ್ಶನ ಸಹ ಸಾಧ್ಯವಾಗಲಿದೆ. ದೋಣಿ ಭರ್ರನೇ ಮುನ್ನುಗ್ಗುತ್ತಿದ್ದರೆ ನೀರಿನ ತೆರೆಗಳು ಅದರ ರಭಸಕ್ಕೆ ಮೈ ಮೇಲೆ ಸಿಂಪರಣೆ ಗೊಂಡು ಶವರಬಾತ ಮಾಡಿದ ಅನುಭವ ಖಂಡಿತ ನಿಮಗೆ ಸಿಗುತ್ತದೆ. ಹಾಂ. ಈ ವಿಹಾರ ದುಬಾರಿಯಲ್ಲ. ವಯಸ್ಕರಿಗೆ ೩೦ ರೂ.ಮಕ್ಕಳಿಗೆ ೧೫ ರೂ.ಈ ಡೋಣಿ ಪಯಣ ಮುಗಿಸಿದ ತಕ್ಷಣ ಮುಂದೇನು? ಎಂದು ಕಾಯುವ ಅಗತ್ಯವೇ ಇಲ್ಲ. ನೀವು ಸ್ವಂತ ವಾಹನದಲ್ಲಿ ಬಂದಿದ್ದರೆ ಕೇವಲ ೧೫ ನಿಮಿಷದಲ್ಲಿ ಪರಿಸರ ಸ್ನೇಹಿ ಕನಕ ಉದ್ಯಾನ ವನ ನಿಮ್ಮನ್ನು ಕೈಬೀಸಿ ಕರೆಯುತ್ತದೆ. ಪರಿಸರ ಸ್ನೇಹಿ ಉದ್ಯಾನವನದಲ್ಲಿ ಸದ್ಯಕ್ಕೆ ಕ್ಯಾಂಟೀನ ವ್ಯವಸ್ಥೆ  ನಡೆದಿದ್ದು ಇಷ್ಟರಲ್ಲೇ ಕಾರ್ಯಾರಂಭವಾಗಲಿದೆ. ಕಾಗಿನೆಲೆ ಪ್ರಾಕಾರ ಕಚೇರಿ ಸಮುಚ್ಚಯದ ಆವರಣದಲ್ಲಿರುವ ಸತ್ಕಾರನಲ್ಲಿ ನಿಮಗಿಷ್ಟವಾದ  ತಿಂಡಿ, ಊಟ ಲಭ್ಯವಿದ್ದು ಮನೆಯಿಂದ ಊಟ-ತಿಂಡಿ ತರೋ ಜಂಜಟವೇ ಬೇಡ.

ಈ ಉದ್ಯಾನ ಪ್ರವೇಶಿಸಿದರೆ, ಬೆಂಗಳೂರಿನ ಲಾಲಬಾಗ, ಹುಬ್ಬಳ್ಳಿ ಗಾಜಿನಮನೆ ಜತೆಗೆ ನೀವು  ಈಗಾಗಲೇ ನೋಡಿರುವ ಉದ್ಯಾನವನಕ್ಕಿಂತ ಭಿನ್ನ ಎನಿಸುವುದಂತೂ ಗ್ಯಾರಂಟಿ. ಹಸಿರ ಹಾಸಿಗೆಯ ಮೇಲೆ ಬಣ್ಣ ಬಣ್ಣದ ಹೂಗುಚ್ಛದ ಚಿತ್ತಾರ. ಗುಲಾಬಿ ತೋಟಗಳು, ನಕ್ಷತ್ರ ವನ, ಕನಕ ದಾಸರ ಸುಂದರ ಮೂರ್ತಿ. ವರ್ಣಿಸಲು ಸಾಧ್ಯವಾಗದಷ್ಟು ಮನಸ್ಸಿಗೆ ಮುದ ನೀಡುವ ಈ ಉದ್ಯಾನವನ ನಿಮ್ಮ ರಜೆಯ ದಿನವನ್ನು ಸಾರ್ಥಕಗೊಳಿಸುತ್ತದೆ. ಕೃತಕ ಫಾಲ್ಸ್ ನಿರ್ಮಿಸಲಾಗಿದ್ದು ಚಿಣ್ಣರಿಗಂತೂ ಈ ಫಾಲ್ಸ್ ಹೇಳಿ ಮಾಡಿಸಿದ ಸ್ಥಳ.

ಪ್ರಯಾಣ ಹೇಗೆ?

ಕನಕದಾಸರ ಕರ್ಮಭೂಮಿ ಕಾಗಿನೆಲೆ ಹಾವೇರಿ ಜಿಯ ಬ್ಯಾಡಗಿ ತಾಲೂಕಿಗೆ ಸೇರಿದ್ದು,  ಕೇವಲ ೧೫ ರಿಂದ ೨೦ ಕಿ.ಮೀ.ದೂರದಲ್ಲಿದೆ. ಪ್ರಯಾಣಕ್ಕೆ ವಿಚಾರಿಸಬೇಕು ಅನ್ನೋ ಧಾವಂತ ಇಲ್ಲ. ಸ್ವಾಗತ ಕಮಾನು ನಿಮ್ಮ ಗಮನ ಸೆಳೆಯುತ್ತದೆ. ಬಸ ಹಾಗೂ ಖಾಸಗಿ ವಾಹನಗಳು ಸದಾ ಲಭ್ಯ. ಕಾಗಿನೆಲೆಯಲ್ಲಿ ಕನಕ ಯಾತ್ರಿ ನಿವಾಸ ವಾಸ್ತವ್ಯಕ್ಕೆ(ಉಳಿದುಕೊಳ್ಳಲು) ಲಭ್ಯವಿದೆ. ಕಡಿಮೆ ಖರ್ಚು, ಕೊಂಚ ಸಮಯದಲ್ಲಿ ಅತ್ಯಕ ಬೆಲೆ ಬಾಳುವ ಸಿಮೆಂಟ ಶಿಲ್ಪವನ ಸಿದ್ಧ ಗೊಂಡಿದೆ. ಈ ಅಪರೂಪದ  ಶಿಲ್ಪವನ ಸಂತ ಶ್ರೇಷ್ಠ ಕನಕದಾಸರ ಕರ್ಮಭೂಮಿ ಕಾಗಿ ನೆಲೆಯ ಕನಕ ಪರಿಸರ ಉದ್ಯಾನವನದಲ್ಲಿ  ಆಖರ್ಷಣೆಯ ಕೇಂದ್ರಬಿಂದುವಾಗಿದೆ. ಕರ್ನಾಟಕ ರಾಜ್ಯ ಶಿಲ್ಪ ಅಕಾಡೆಮಿಗೆ ಮುಕುಟಪ್ರಾಯಗುವ ಈ ಶಿಲ್ಪವನ  ಇಲ್ಲಿದೆ.  ಕರ್ನಾಟಕ ಶಿಲ್ಪ ಅಕಾಡೆಮಿ ಅಸ್ತಿತ್ವಕ್ಕೆ ಬಂದ ೨೦ ವರ್ಷಗಳಲ್ಲಿ ಉತ್ತರ ಕರ್ನಾಟಕದಲ್ಲಿ ಶಿಲ್ಪಗಳನ್ನು ಸಿದ್ಧಪಡಿಸುವ ಶಿಬಿರ ಇಲ್ಲಿ ಆಯೋಜಿಸಿದ್ದು ವಿಶೇಷ. ಕಾಗಿನೆಲೆ ಅಭಿವೃದ್ಧಿ ಪ್ರಾಕಾರ ರಾಜ್ಯದ ಕನ್ನಡ ಮತ್ತು ಸಂಸ್ಕತಿ ಇಲಾಖೆ ಹಾಗೂ ಶಿಲ್ಪ ಅಕಾಡೆಮಿ ಸಹಯೋಗದಲ್ಲಿ ಕನ ಕದಾಸರ ಕರ್ಮಭೂಮಿ ಕಾಗಿನೆಲೆಯ ಪರಿಸರ ಉದ್ಯಾನವನದಲ್ಲಿ ಶಿಬಿರ ನಡೆಸಿದೆ. ಸಂತ ಶ್ರೇಷ್ಠ ಕನಕದಾಸರ ಬದುಕು ಮತ್ತು ಬರಹದ ಎಲ್ಲ ಕಾಲ ಘಟ್ಟಗಳನ್ನು ಪರಿಚ ಯಿಸುವ ಕನಿಷ್ಠ  ೧೫ ಕ್ಕೂ ಅಕ ಪ್ರಸಂಗಗಳನ್ನು ಪ್ರಚುರ ಪಡಿಸುವ ಶಿಲ್ಪಗಳನ್ನು ತಯಾರಿಸಲಾಗಿದೆ.

ಉಡುಪಿ ಶ್ರೀಕೃಷ್ಣನ ದರ್ಶನ, ಜತಿ ಜಡ್ಯ, ಸಮಾಜದ ಅಂಕು-ಡೊಂಕುಗಳು, ಮೋಹನ ತರಂಗಣಿ, ಹರಿಭಕ್ತಸಾರ, ನಳ ಚರಿತ್ರೆ ಸೇರಿದಂತೆ ಕನಕರು ಕರ್ಮಭೂಮಿ ಕಾಗಿನೆಲೆಯಲ್ಲಿ ಜೀವಿತದುದ್ದಕ್ಕೂ ಮಾಡಿದ ಪವಾಡಗಳನ್ನು ಅತ್ಯಂತ ವಿಹಂಗಮವಾಗಿ ಸಾಕ್ಷಾತ್ಕರಿಸುವ ರೀತಿ ಯಲ್ಲಿ ಶಿಲ್ಪಗಳನ್ನು ಸಿದ್ಧಗೊಳಿಸಲಾಗಿದೆ.

ಆಯುಕ್ತ ಮಲ್ಲೇಶಪ್ಪ ಹೊರಪೇಟೆ ಅವರ ಇಚ್ಛಾಶಕ್ತಿ ಹಾಗೂ ಅಕಾಡೆಮಿ ಜೀವಂತಿಕೆಗೆ ಸಾರ್ಥಕತೆ ತಂದುಕೊಡುವ ಈ ಪ್ರಯತ್ನ ನಿಜಕ್ಕೂ  ಶ್ಲಾಘನೀಯ. ಉಳಿದುಕೊಳ್ಳಲು ವಸತಿಗೃಹಗಳ ಸಮುಚ್ಛಯ ಲಭ್ಯವಿದೆ. ಕಾಗಿನೆಲೆ ಅಭಿವೃದ್ಧಿ ಪ್ರಾಕಾರಕ್ಕೆ ಕರೆ ಮಾಡಿ ನಿಮ್ಮ ರಜೆಯ ಮಜಕ್ಕೆ ಬುಕ್ಕಿಂಗ ಮಾಡಿ. ದೂರವಾಣಿ ಸಂಖ್ಯೆ (೦೮೩೭೫)೨೮೯೩೮೮ ಹೆಚ್ಚಿನ ಮಾಹಿತಿಗೆ ಮೊ- ೯೪೪೮೩೩೮೮೦೬ ಸಂಪರ್ಕಿಸಬಹುದು.

ಬೊಂಬಾಟ್ ಬಾಡ !

ಹಾಔಏರಿ ಜಿಲ್ಲೆ  ಶಿಗ್ಗಾವಿ ತಾಲೂಕಿನ ಬಂಕಾಪುರ ಬಳಿ ಇರುವ ಬಾಡ. ಕನಕದಾಸರ ಜನ್ಮಭೂಮಿ. ಇಲ್ಲಿರುವ ಅವರ ಅರಮನೆ ಸಮೀಪಿಸುತ್ತಿದ್ದಂತೆ ನಿಮ್ಮ ಮೊಬೈಲಗಳು ಚಕ ಚಕ್ಕನೆ ಫೋಟೋ ಕ್ಲಿಕ್ಕಿ ಸುತ್ತವೆ. ಸೆಲಿ ಪ್ರಿಯರಂತೂ ನಾ ಮುಂದು ತಾ ಮುಂದು ಎಂದು ಪೈಪೆಟಿ ನಡೆಸಿದರೂ ಅಚ್ಚರಿ ಎನಿಸದು. ದೊಣ್ಣೆನಾಯಕನಾಗಿದ್ದ ತಿಮ್ಮಪ್ಪ ನಾಯಕ, ಅಭಿವೃದ್ಧಿ ಕೆಲಸ ಕೈಗೊಂಡ ಸಮಯದಲ್ಲಿ ಬಂಗಾರ (ಕನಕ) ದೊರೆತು ಕನಕ ನಾಯಕನಾದ. ಭಕ್ತಿಯಲ್ಲಿ ಅನರುಕ್ತನಾಗಿ ಮೋಹನ ತರಂಗಿಣಿ, ಹರಿ ಭಕ್ತಸಾರದಂಥ ಶ್ರೇಷ್ಠ ಕೀರ್ತನೆಗಳ ಮೂಲಕ ಭಕ್ತ ಶ್ರೇಷ್ಠ ಕನಕದಾಸರಾಗಿ ವಿಶ್ವಕ್ಕೇ ಸೌಹಾರ್ದತೆ ಬೀಜ ಬಿತ್ತಿದ ಪುಣ್ಯ ಪುರುಷ ಜನ್ಮ ತಳೆದ ಈ ಅರಮನೆ ಇರುವ ಊರೇ ಬಾಡ.

ಅರಮನೆಯಲ್ಲಿ ಏನಿದೆ?

ಮೈಸೂರು, ಬೆಂಗಳೂರ ಅರಮನೆಗಳಲ್ಲಿ ರಾಜ ರವಿ ವರ್ಮನ ಕಲಾ ಕೃತಿಗಳನ್ನು ವೀಕ್ಷಿಸು ವುದಾದರೆ, ಬಾಡದ ಅರಮನೆಯಲ್ಲಿ ಕನಕದಾಸರ ಬದುಕಿನ ಎಲ್ಲ ಯಶೋಗಾಥೆಗಳ ಸಮ ಗ್ರವಾದ ಚಿತ್ರಣವನ್ನು ಅಧ್ಯಯನ ರೂಪದಲ್ಲಿ ಸೆರೆ ಹಿಡಿಯಬಹುದಾದ ಕಲಾ ಕೃತಿಗಳು, ಕಲ್ಲಿ ನಲ್ಲಿ ಕೆತ್ತಿರುವ ಸಂಕೀರ್ತನೆಗಳು, ಆಳೆತ್ತರದ ಮೋಹಕ ಕನಕದಾಸರ ಪುತ್ಥಳಿ, ಅಶ್ವಾರೋಹಿ ಕನ ಕರು, ಸಂಜೆ ಕಣ್ಣು-ಕಿವಿಗೆ ತಂಪು-ಇಂಪೆನಿಸುವ ದೀಪಾಲಂಕಾರ ಸಂಗೀತ ಕಾರಂಜಿ ಯಾತ್ರಾ ತಾಣದ ವಿಶೇಷ.

ಅರಮನೆ ಹಾಗೂ ಸುತ್ತ-ಮುತ್ತಲ ಹಸಿರ ತಪ್ಪಲಲ್ಲಿ ಮೈವೆತ್ತಿಕೊಂಡಿರುವ ಕನಕದಾಸರ ಹತ್ತು ಹಲವು ಕುರುಹುಗಳು. ಧ್ಯಾನಸಕ್ತರಿಗೆ ತಪೋವನ, ಮನ ಮೋಹಕ ಉದ್ಯಾನವನ ವೀಕ್ಷಣೆಗೆ ಒಂದು ದಿನವಾದರೂ ಬೇಕು. ಈ ಕ್ಷಣಗಳನ್ನು ಸವಿಯಬೇಕಿದ್ದಲ್ಲಿ ಈ ಅರಮನೆಯ ಅನತಿ ದೂರದ ಯಾತ್ರೀ ಸಮುಚ್ಛಯಗಳು ಲಭ್ಯವಿವೆ.

ದಾರಿ ಹೇಗೆ?

ಜಿ ಕೇಂದ್ರ ಹಾವೇರಿಯಿಂದ ಬಾಡದ ಅರಮನೆ ೨೫ ಕಿ.ಮೀ. ತಾಲೂಕ ಕೇಂದ್ರ ಶಿಗ್ಗಾವಿ ಯಿಂದ ೮ ಕಿ.ಮೀ. ರಾಷ್ಟ್ರಪಕ್ಷಿ ನವಿಲುಧಾಮ ಬಂಕಾಪುರದಿಂದ ೫ ಕಿ.ಮೀ ಹಾಗೂ ಹುಬ್ಬಳ್ಳಿ ಯಿಂದ ೫೩ ಕಿ.ಮೀ. ಕ್ರಮಿಸಬೇಕು. ಬಸ, ರೈಲು ಹಾಗು ವಿಮಾನ ಸೌಲಭ್ಯವಿದೆ

Like our news?