ನೆಟ್ಟಿಗರೆ ಹುಷಾರ್ ; ಸೈಬರ್ ಖದೀಮರ ಕಣ್ಣೀಗ ಗೂಗಲ್ ಮ್ಯಾಪ್ ಮೇಲೆ.... Google Map#Fraud....

Sun, Apr 28, 2019

BD1News ಕನ್ನಡ ವರದಿ: ನೆಟ್ಟಿಗರೆ ಹುಷಾರ್..! ಸೈಬರ್ ಖದೀಮರ ಕಣ್ಣೀಗ ಗೂಗಲ್ ಮ್ಯಾಪ್ ಮೇಲೂ ಬಿದ್ದಿದೆ. ಮ್ಯಾಪ್​ನಲ್ಲಿರುವ ಬ್ಯಾಂಕ್​ಗಳ ದೂರವಾಣಿ ಸಂಖ್ಯೆಗಳನ್ನೇ ಬದಲಿಸುವ ವಂಚಕರು, ನಂಬಿ ಕರೆ ಮಾಡುವ ಖಾತೆದಾರರಿಗೆ ಟೋಪಿ ಹಾಕಿರುವಂತಹ ಅನೇಕ ಪ್ರಕರಣಗಳು ಮಹಾರಾಷ್ಟ್ರದಲ್ಲಿ ಬೆಳಕಿಗೆ ಬಂದಿವೆ.

ಹೇಗೆ ವಂಚಿಸ್ತಾರೆ ಗೊತ್ತಾ..?

ಗೂಗಲ್ ಮ್ಯಾಪ್​ನಲ್ಲಿನ ಮಾಹಿತಿಗಳನ್ನು ವಿಕಿಪೀಡಿಯಾ ರೀತಿಯಲ್ಲೇ ಯಾರು ಬೇಕಾದರೂ ಬದಲಾಯಿಸಬಹುದಾಗಿದೆ. ಆದರೆ ನಕಲಿ ಗೂಗಲ್ ಖಾತೆ ಮೂಲಕ ಕೆಲ ವಂಚಕರು ಗೂಗಲ್ ಮ್ಯಾಪ್​ನಲ್ಲಿನ ಬ್ಯಾಂಕ್​ಗಳ ದೂರವಾಣಿ ಸಂಖ್ಯೆ ಬದಲಾಯಿಸಿ ತಮ್ಮ ಸಂಪರ್ಕ ಸಂಖ್ಯೆ ಸೇರಿಸುತ್ತಿದ್ದಾರೆ. ಇದರ ಅರಿವಿಲ್ಲದೆ ಸಾರ್ವಜನಿಕರು ಗೂಗಲ್​ನಲ್ಲಿ ಬ್ಯಾಂಕ್​ಗಳ ಮಾಹಿತಿ ಶೋಧಿಸಿದಾಗ ತಮಗೆ ಗೊತ್ತಿಲ್ಲದಂತೆಯೇ ವಂಚಕರ ಸಂಖ್ಯೆಗೆ ಕರೆ ಮಾಡುತ್ತಾರೆ. ಅಮಾಯಕರನ್ನು ತಕ್ಷಣ ಬಲೆಗೆ ಬೀಳಿಸುವ ವಂಚಕರು ಖಾತೆ, ಕ್ರೆಡಿಟ್, ಡೆಬಿಟ್ ಕಾರ್ಡ್​ಗಳ ಮಾಹಿತಿ ಪಡೆದು ಹಣ ಲಪಟಾಯಿಸುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ಇದೇ ರೀತಿ ಬ್ಯಾಂಕ್ ಆಫ್ ಇಂಡಿಯಾದ ಒಂದು ಶಾಖೆಯ ದೂರವಾಣಿ ಸಂಖ್ಯೆ ಬದಲಿಸಿ ಮೂವರು ಖಾತೆದಾರರಿಗೆ ವಂಚಿಸಿರುವ ಕುರಿತು ಇತ್ತೀಚೆಗಷ್ಟೇ ದೂರು ದಾಖಲಾಗಿದೆ. ಥಾಣೆ ಪೊಲೀಸರು ಈ ಕುರಿತು ತನಿಖೆ ಆರಂಭಿಸಿದ್ದು, ಬ್ಯಾಂಕ್ ಆಫ್ ಇಂಡಿಯಾದಿಂದ ಲಿಖಿತ ದೂರು ಪಡೆದುಕೊಂಡಿದ್ದಾರೆ.ಗೂಗಲ್ ವಾದವೇನು..?

ಉತ್ತಮ ಸೇವೆ ನೀಡುವ ಉದ್ದೇಶದಿಂದ ದೂರವಾಣಿ ಸಂಖ್ಯೆ ಸೇರಿಸುವ ಅಥವಾ ಬದಲಾಯಿಸುವ ಅವಕಾಶ ನೀಡಿದ್ದೇವೆ. ಆದರೆ ಯಾವುದೇ ದುರ್ಬಳಕೆ ಆಗುತ್ತಿರುವುದು ಗಮನಕ್ಕೆ ಬಂದ ಕೂಡಲೇ ಸೂಕ್ತ ಕ್ರಮ* *ತೆಗೆದುಕೊಳ್ಳಲಾಗುತ್ತಿದೆ ಎಂದು ಗೂಗಲ್ ಇಂಡಿಯಾ ವಕ್ತಾರರು ತಿಳಿಸಿದ್ದಾರೆ.


ಎಚ್ಚರವಿರಲಿ,

ನೀವು ಕರೆ ಮಾಡಿದಾಗ ಯಾವುದೇ ಕಾರಣಕ್ಕೂ ಆನ್​ಲೈನ್ ಬ್ಯಾಂಕಿಂಗ್ ಯೂಸರ್​ನೇಮ್ ಪಾಸ್​ವರ್ಡ್, ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್​ಗಳ ಸಂಖ್ಯೆ, ಹುಟ್ಟಿದ ದಿನಾಂಕ, ಸಿವಿವಿ ಸಂಖ್ಯೆ ನೀಡಬೇಡಿ.

ಗೂಗಲ್ ಸರ್ಚ್ ಎಂಜಿನ್​ನಲ್ಲಿ ತೋರಿಸುವ ದೂರವಾಣಿ ಸಂಖ್ಯೆಗೆ ನೇರವಾಗಿ ಕರೆಮಾಡಬೇಡಿ.

ಪಾಸ್​ಬುಕ್ ಅಥವಾ ಬ್ಯಾಂಕ್ ನೀಡುವ ಕಿಟ್​ನಲ್ಲಿ ನಮೂದಿಸಿರುವ ಅಧಿಕೃತ ದೂರವಾಣಿ ಸಂಖ್ಯೆ ಬಳಸಿ.

Like our news?