ಶೋಕ ಸೂಚಕ ಗೋಡೆ…;ನಾಗೇಶ್ ತಳವಾರವರ ಲೇಖನ....#bd1news.in

Sat, Feb 16, 2019

ಲೇಖನ -ನಾಗೇಶ ತಳವಾರ


ಶೋಕ ಸೂಚಕ ಗೋಡೆ…

ಯೋಧರ ಮೇಲೆ ಅಟ್ಯಾಕ್ ಆದಾಗ ಒಂದಿಷ್ಟು ಬೇಸರ.. ಎರಡು ಹನಿ ಕಣ್ಣೀರು..

ಸೋಷಿಯಲ್ ಮೀಡಿಯಾದಲ್ಲಿ ವೀರಾವೇಷದ ಮಾತುಗಳು.. ಮೊದಲು ತಾಯ್ನಾಡು.. ಪರ-ವಿರೋಧದ ವಾಗ್ವಾದ.. ಸಮಯ ಉರುಳಿದಂತೆ ಸ್ವಬದುಕಿನ ಹಾದಿಯಲ್ಲಿ ಹೆಜ್ಜೆ ಹಾಕ್ತಿರುತ್ತೇವೆ. ಯಾಕಂದ್ರೆ, ಪ್ರತಿಯೊಬ್ಬರಿಗೂ ಅವರದೆಯಾದ ಬದುಕಿದೆ. ಕುಟುಂಬವಿದೆ. ಪ್ರೀತಿಸುವ ಜೀವಗಳಿವೆ. ಭವಿಷ್ಯದ ಬಗ್ಗೆ ಕನಸು ಕಟ್ಟಿಕೊಂಡಿರುವ ಅಸಂಖ್ಯಾತ ಮನಸ್ಸುಗಳಿವೆ. ನನ್ನನ್ನು ಒಳಗೊಂಡಂತೆ ನಾವೆಲ್ಲ ನಮ್ಮ ನಮ್ಮ ಕನಸುಗಳ ಬೆನ್ನೇರಿ ಹೊರಟವರೆ. ಇದು ಖಂಡಿತ ತಪ್ಪಲ್ಲ. ಈ ತರಹದ ಘನಘೋರ ದಾಳಿಯಾಗಿ ಯೋಧರು, ಸಮಾನ್ಯ ಜನರ ರಕ್ತ ರಸ್ತೆಯಲ್ಲಿ ಹರಿದು ಹೋಗುವುದನ್ನ ಕಂಡಾಗ ಪ್ರತಿಯೊಬ್ಬರ ಮನ ಮರಗುತ್ತೆ. ಓರ್ವ ಮಗನಾಗಿ, ಅಣ್ಣ, ತಮ್ಮನಾಗಿ, ಗಂಡನಾಗಿ, ಅಪ್ಪನಾಗಿರುವ ಯೋಧ ರಕ್ತದ ಹೊಳೆಯಲ್ಲಿ ಕೊಚ್ಚಿಕೊಂಡು ಹೋದಾಗ, ಆತನ ಸಮಸ್ತ್ರ ನೆತ್ತರಿನಲ್ಲಿ ತೊಯ್ದು ಹೋದಾಗ, ಉಸಿರು ಚೆಲ್ಲಿದ ದೇಹದ ಗುರುತು ಸಿಗದೇ ಹೋದಾಗ ದಾಳಿಕೋರರನ್ನ ಕೊಚ್ಚಿ ಹಾಕುವಷ್ಟು ಆಕ್ರೋಶ ಎದೆಯಗೂಡಿಂದ ಆಚೆ ಬರಲು ತುದಿಗಾಲ ಮೇಲೆ ನಿಂತಿರುತ್ತೆ. ಶತ್ರುಗಳ ಸಂಹಾರಕ್ಕೆ ನಾವು ರೆಡಿ ಅನ್ನೋ ಭಾವನಾತ್ಮಕ ನುಡಿಗಳು ಕಡಲ ಮೊರೆತದ ಅಬ್ಬರದಂತೆ ಹೊರ ಬರಲು ಶುರು ಮಾಡ್ತವೆ. ಆದ್ರೆ, ವಾಸ್ತವ ಬೇರೆಯಾಗಿರುತ್ತೆ. ವಿಶ್ವದಲ್ಲಿ ಅತೀ ಹೆಚ್ಚು ಯುಜನತೆಯನ್ನ ಹೊಂದಿರುವ ದೇಶ ಭಾರತ. ಆದ್ರೆ, ಅಂತಹ ಯುವಕರ ಕೈಯಲ್ಲಿ, ತಲೆಯಲ್ಲಿ ಏನು ತುಂಬಿದೆ ಅನ್ನೋದನ್ನ ಸೂಕ್ಷ್ಮವಾಗಿ ಗಮನಿಸಬೇಕಾಗಿದೆ. ಜಗತ್ತಿನ ಇತರೆ ರಾಷ್ಟ್ರಗಳು ಎತ್ತ ಸಾಗುತ್ತಿವೆ. ಭಾರತ ಯಾವ ಕಡೆ ಮುಖ ಮಾಡ್ತಿದೆ ಅನ್ನೋದರ ಅರಿವು ಮೂಡಿಸಬೇಕಿದೆ. ಯಾಕಂದ್ರೆ, ಉಗ್ರರ ಹಿಂಸೆಯನ್ನ ಭಾರತ ಮಾತ್ರ ಅನುಭವಿಸ್ತಿಲ್ಲ. ಸಣ್ಣಪುಟ್ಟ ಸಂಯುಕ್ತ ರಾಷ್ಟ್ರಗಳಲ್ಲಿಯೂ ಇವರ ಕಬಂಧಬಾಹು ವ್ಯಾಪಿಸಿಕೊಂಡಿದೆ. ಮನುಷ್ಯತ್ವವಿಲ್ಲದ ಕ್ರೂರಿಗಳು ಭೀಭತ್ಸ ಕೃತ್ಯವೆಸಗ್ತಿದ್ದಾರೆ. ಇದಕ್ಕೆ ಕೆಲ ರಾಷ್ಟ್ರಗಳ ಕುಮ್ಮಕ್ಕು ಸಹ ಇದೆ. ಒಂದ್ಕಡೆ ತೊಟ್ಟಿಲು ತೂಗಿ ಇನ್ನೊಂದ್ಕಡೆ ಮಗುವನ್ನ ಚೂಟುವ ದೇಶಗಳಿಗೇನೂ ಕಡಿಮೆಯಿಲ್ಲ. ಹೀಗಾಗಿಯೇ ಅದೆಷ್ಟೋ ರಾಷ್ಟ್ರಗಳು ತಮ್ಮ ಸೇನಾ ಪಡೆಯನ್ನ ಬಲಿಷ್ಟಗೊಳಿಸಿಕೊಳ್ತಿವೆ. ಇನ್ನಷ್ಟು ಶಕ್ತಿ ತುಂಬುವ ಕೆಲಸ ಮಾಡ್ತಿವೆ. ಹಾಗಂತ ನೆರೆಯ ರಾಷ್ಟ್ರಗಳ ಮೇಲೆ ದಾಳಿ ಮಾಡಲು ಅಲ್ಲ. ನಮ್ಮ ಮೇಲೆ ಯಾರಾದ್ರೂ ದಾಳಿ ಮಾಡಿದ್ರೆ, ಅವರನ್ನ ಸಮರ್ಥವಾಗಿ ಎದುರಿಸಲು. ಇತಿಹಾಸದ ಪುಟದಲ್ಲಿಯೂ ಇದಕ್ಕೆ ಪುರಾವೆಯಿದೆ. ದಂಡೆತ್ತಿ ಬರುವ ಬೇರೆ ರಾಜ್ಯರನ್ನ ಎದುರಿಸಲು, ಸಮಾಜಘಾತುಕ ಶಕ್ತಿಗಳನ್ನ ಮಟ್ಟಹಾಕಲು ತಯಾರದ ಪಡೆ, ಮುಂದೆ ದೇಶ, ಪ್ರಜಾಪ್ರಭುತ್ವ, ಒಕ್ಕೂಟ ವ್ಯವಸ್ಥೆ, ವಿಶ್ವಸಂಸ್ಥೆ ಅನ್ನೋದು ಸ್ಥಾಪಿತವಾದ್ಮೇಲೆ, ಹಿಂದಿನ ಸೇನಾ ಪದ್ಧತಿಯ ಜೊತೆಗೆ ಆಧುನಿಕ ಶಸ್ತ್ರಾಸ್ತ್ರಗಳ ಬಳಕೆ ಶುರುವಾಗಿದೆ. ಇನ್ನು ಮೇನ್ ಪಾಯಿಂಟಿಗೆ ಬರುವುದಾದ್ರೆ, ಸೇನೆಗೆ ಸೇರಬೇಕಾದ್ರೆ, ಪ್ರತಿಯೊಂದು ರಾಷ್ಟ್ರವು ತನ್ನದೆಯಾದ ಒಂದಿಷ್ಟು ನೀತಿ ನಿಯಮಗಳನ್ನ ಮಾಡಿಕೊಂಡಿದೆ. ಜೊತೆಗೆ ಕಾಲ ಬದಲಾದಂತೆ ಒಂದಿಷ್ಟು ಬದಲಾವಣೆಗಳನ್ನ ಸಹ ಮಾಡಿಕೊಂಡು ಬಂದಿವೆ, ಬರ್ತಿವೆ. ಇಸ್ರೇಲ್ ನಮ್ಮ ಬೆಂಗಳೂರಿನಷ್ಟಿದೆ. ಕೃಷ್ಟಿಯಲ್ಲಿ ವಿಶ್ವಕ್ಕೆ ಮಾದರಿಯಾಗಿರುವ ಈ ದೇಶದಲ್ಲಿ ಸೇನಾ ಸೇವೆ ಕಡ್ಡಾಯ. 18 ವರ್ಷ ಮೇಲ್ಪಟ್ಟವರು ಇಂತಿಷ್ಟು ವರ್ಷ ಸೇನೆಯಲ್ಲಿ ಕಾರ್ಯನಿರ್ವಹಿಸಬೇಕು. ಇಲ್ಲಿನ ಜನ ಆಗಾಗ ರಜೆ ಪಡೆದು ಸೇನೆಯಲ್ಲಿ ಸೇವೆ ಸಲ್ಲಿಸಿ ಬರ್ತಾರೆ. ಇದರ ನಡುವೆ ಇದನ್ನ ವಿರೋಧಿಸಿದ ಯಹೂದಿ ಯುವತಿ ತಾಹಿರ್ ಕಮಿನರ್ ಸಾಕಷ್ಟು ಸುದ್ದಿಯಾದ್ಳು. ನನ್ಗೆ ಶಾಂತಿಯಲ್ಲಿ ನಂಬಿಕೆಯಿದೆ. ಹೀಗಾಗಿ ನಾನು ಇದನ್ನ ನಾನು ಯುದ್ಧವನ್ನು ನಿರಾಕರಿಸುತ್ತೇನೆ ಅಂತಾ ಹೇಳಿದ್ಳು. ಇದಕ್ಕಾಗಿ ಹಲವು ಬಾರಿ ಆಕೆ ಜೈಲು ಶಿಕ್ಷೆ ಅನುಭವಿಸಿದ್ದಾಳೆ. ಇಲ್ಲಿ ನಾವು ಗಮನಿಸಬೇಕಾಗಿರುವುದು ಪ್ರಜಾಪ್ರಭುತ್ವದ ಮೇಲೆ ನಂಬಿಕೆಯಿರುವ ಪ್ರತಿಯೊಬ್ಬರು ಶಾಂತಿಯನ್ನ ಬಯಸ್ತಾರೆ. ಅವರ್ಯಾರಿಗೂ ಯುದ್ಧ ಬೇಡ. ಆದ್ರೆ, ಸ್ವರ್ಗವನ್ನ ನರಕ ಮಾಡಲು ಹೊರಟ ಉಗ್ರರು ಇದನ್ನ ಕೇಳಬೇಕಲ್ಲ. ನಮ್ಮನ್ನ ನಾವು ರಕ್ಷಣೆ ಮಾಡಿಕೊಳ್ಳುವುದಕ್ಕಾಗಿಯಾದ್ರೂ ಸೇನೆ ಬೇಕಲ್ಲವೆ? ಯುಎಇ ನಾಡಿನಲ್ಲಿ 2014ರಲ್ಲಿ ಸೇನಾ ಸೇವೆ ಕಡ್ಡಾಯ ಮಾಡಲಾಗಿದೆ. 18 ರಿಂದ 30 ವಯಸ್ಸಿನ ವ್ಯಕ್ತಿಗಳು ಸೇನೆಯಲ್ಲಿ ಸೇವೆ ಸಲ್ಲಿಸಬೇಕು. ಪದವಿ ಪಡೆದವರು 9 ತಿಂಗಳು, ಪಡೆಯದೆ ಇರುವವರು 2 ವರ್ಷ. ಇನ್ನು ಪುಟ್ಟ ರಾಷ್ಟ್ರ ಟರ್ಕಿ ಉಗ್ರರ ಜೊತೆ ನಂಟು ಹೊಂದಿರುವ ರಾಷ್ಟ್ರಗಳ ಜೊತೆ ಗಡಿಯನ್ನ ಹಂಚಿಕೊಂಡಿದೆ. ಹೀಗಿದ್ರೂ, ಅದು ತನ್ನ ದೇಶದ ರಕ್ಷಣೆಗಾಗಿ ಎಲ್ಲ ತ್ಯಾಗಕ್ಕೂ ಸಿದ್ಧವಾಗಿದೆ. ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಸೇನಾ ಪಡೆಯ ದಾಳಿ ಸೇರಿದಂತೆ ಚೀನಾದ ಕುತಂತ್ರವನ್ನ ಸಹ ದಕ್ಷಿಣ ಕೊರಿಯಾ ಸಮರ್ಥವಾಗಿ ಎದುರಿಸ್ತಾ ಬರ್ತಿದೆ. ಇಲ್ಲಿ ಸಹ ಸೇನಾ ಸೇವೆ ಕಡ್ಡಾಯವಿದೆ. ಪ್ರಕೃತಿಯ ವಿಕೋಪಕ್ಕೆ ಸದಾ ತತ್ತರಿಸು ಹೋಗುವ ಜಪಾನ್ ಇವತ್ತು ಇಡೀ ವಿಶ್ವದಲ್ಲಿ ತನ್ನ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನ ರಪ್ತು ಮಾಡುತ್ತೆ. ಬಲಿಷ್ಟ ಅಮೆರಿಕಾವನ್ನ ಎದುರು ಹಾಕಿಕೊಂಡು ದಿಟ್ಟತನದಿಂದ ಬದುಕುತ್ತಿರುವ ಗುಬ್ಬಚ್ಚಿಯಷ್ಟು ಇರುವ ಜಪಾನ್, ಪವರ್ ಫುಲ್ ಮಿಲಿಟರಿ ಪಡೆಯಲ್ಲಿ 5ನೇ ಸ್ಥಾನದಲ್ಲಿದೆ. ಆದ್ರೆ, ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ, ಬಲಿಷ್ಟ ಸೇನಾ ಪಡೆಯಲ್ಲಿ 4ನೇ ಸ್ಥಾನ ಹಾಗು ಜನಸಂಖ್ಯೆಯಲ್ಲಿ 2ನೇ ಸ್ಥಾನದಲ್ಲಿರುವ ಭಾರತ, ಕಾಶ್ಮೀರದ ಎರಡ್ಮೂರು ಜಿಲ್ಲೆಗಳಲ್ಲಿ ನಡೆಯುವ ಹಿಂಸಾಕೃತ್ಯಕ್ಕೆ ಯೋಧರನ್ನ, ಅಮಾಯಕರನ್ನ ಕಳೆದುಕೊಳ್ತಿವೆ. ರಾಜತಾಂತ್ರಿಕ, ವೈಚಾರಿಕ, ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ಏನೇ ಇರಬಹುದು. ಆದ್ರೆ, ದೇಶದ ವಿಚಾರ ಬಂದಾಗ ನಾವೆಲ್ಲ ಒಂದು ಅನ್ನೋ ಮನೋಭಾವನೆ ಬರಬೇಕು. ಈ ದೇಶ ನನ್ನದು ಅನ್ನೋ ಸ್ಪಷ್ಟ ಅರಿವು ಇರಬೇಕು. ಹಾಗಾಗಬೇಕಾದ್ರೆ, ಅತೀ ಹೆಚ್ಚು ಯುವಪಡೆಯನ್ನ ಹೊಂದಿರುವ ಭಾರತ, ಸೇನಾ ನೇಮಕಾತಿ ವಿಚಾರದಲ್ಲಿ ಒಂದಿಷ್ಟು ಬದಲಾವಣೆ ತರಬೇಕು. ಸೇನಾ ಸೇವೆ ಕಡ್ಡಾಯ ಮಾಡಲು ಆಗದಿದ್ರೂ ಯಾರು ಸೇನೆಯಲ್ಲಿ ಒಂದಿಷ್ಟು ಕಾಲ ಸೇವೆ ಸಲ್ಲಿಸಲು ಬಯಸ್ತಾರೋ ಅವರಿಗೆ ಅವಕಾಶ ಕೊಡುವ ನಿಟ್ಟಿನಲ್ಲಿ ಯೋಚನೆ ಮಾಡಬೇಕಿದೆ. ಆಗ, ರಾಷ್ಟ್ರ ಭಕ್ತಿ, ಯೋಧರ ಬದುಕು ಬವಣೆ ನಿಜವಾಗಿ ಅರ್ಥವಾದೀತು. ಇಲ್ದೆ ಹೋದ್ರೆ ಪತ್ರಿಕೆಯ ಪುಟಗಳು, ಟಿವಿ ಸ್ಕ್ರೀನ್ ಆಗಾಗ ಕೆಂಪಾಗುತ್ತೆ. ಸೋಷಿಯಲ್ ಮೀಡಿಯಾದ ಹಣೆ, ಶೋಕ ಸೂಚಕ ಗೋಡೆಯಾಗುತ್ತೆ…

Like our news?