ಜೀವಸತ್ವವನ್ನು ವೃದ್ದಿಸುವ ಸೂರ್ಯ ನಮಸ್ಕಾರದ ಬಗ್ಗೆ ನಿಮಗೆಷ್ಟು ಗೊತ್ತು... ? ತಿಳಿಯೋಣ ಬನ್ನಿ ....! #Yoga #Health #Stayfit #Surya Namskara

Wed, Jul 21, 2021

ಅನಾದಿಕಾಲದಿಂದಲೂ ನಮ್ಮ ಸಂಸ್ಕೃತಿ ಆಚರಣೆಗಳು ಒಂದಲ್ಲ ಒಂದುರೀತಿಯಲ್ಲಿ ಜ್ಞಾನ ಕಣಜ ಎಂಬುದು ಎಷ್ಟು ಸತ್ಯವೋ ಅಷ್ಟೇ ಅವುಗಳ ಅಳವಡಿಕೆ ಜೀವನಕ್ಕೆ ಸಕಾರಾತ್ಮಕ ಅಂಶಗಳನ್ನು ಒದಗಿಸುತ್ತದೆ ಎಂಬುದು ಅಕ್ಷರಶಃ ಸತ್ಯ....


ಈ ನಿಟ್ಟಿನಲ್ಲಿ ಇಂದು ಸೂರ್ಯ ನಮಸ್ಕಾರ ದ ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ ಬನ್ನಿ....

ಸೂರ್ಯ ನಮಸ್ಕಾರ್ ಎಂಬ ಹೆಸರು ಸಂಸ್ಕೃತ  ಸೂರ್ಯ್ , "ಸೂರ್ಯ" ಮತ್ತು  ನಮಸ್ಕಾರ , "ಶುಭಾಶಯ" ಅಥವಾ "ನಮಸ್ಕಾರ" ದಿಂದ ಬಂದಿದೆ. ಸೂರ್ಯ ಹಿಂದೂ ದೇವರು  ಮತ್ತು ಎಲ್ಲಾ ಜೀವನದ ಆತ್ಮ ಮತ್ತು ಮೂಲವೆಂದು ಗುರುತಿಸುತ್ತದೆ ...ಇದರಿಂದಾಗಿ ಸೂರ್ಯ ನಮಸ್ಕಾರವು  ಸೂರ್ಯನಿಗೆ ವಂದನೆಗಳನ್ನು ಸಲ್ಲಿಸುವ  ಆಚರಣೆಯಾಗಿದೆ....

ಈ ಆಸನ ಅನುಕ್ರಮವನ್ನು ಮೊದಲು 20 ನೇ ಶತಮಾನದ ಆರಂಭದಲ್ಲಿ ಯೋಗ ಎಂದು ದಾಖಲಿಸಲಾಯಿತು, ಆದರೆ ಇದಕ್ಕೂ ಮೊದಲು ಭಾರತದಲ್ಲಿ ಇದೇ ರೀತಿಯ ವ್ಯಾಯಾಮಗಳು ಬಳಕೆಯಲ್ಲಿದ್ದವು... ಮತ್ತು  12 ಆಸನಗಳ ಗುಂಪನ್ನು ಸೌರ ದೇವತೆ ಸೂರ್ಯನಿಗೆ ಸಮರ್ಪಿಸಲಾಗಿದೆ.. ಕೆಲವು ಭಾರತೀಯ ಸಂಪ್ರದಾಯಗಳಲ್ಲಿ, ಸ್ಥಾನಗಳು ಪ್ರತಿಯೊಂದೂ ವಿಭಿನ್ನ ಮಂತ್ರದೊಂದಿಗೆ ಸಂಬಂಧ ಹೊಂದಿವೆ ...


ಸೂರ್ಯ ನಮಸ್ಕಾರವು ಅನೇಕ ಆಸನಗಳಿಂದ ಕೂಡಿದ್ದು ಇದು ಎಲ್ಲಾ ವಿಧದಲ್ಲೂ ಉಪಯುಕ್ತವಾಗುವ ಅಭ್ಯಾಸವಾಗಿದೆ...

ಸೂರ್ಯ ನಮಸ್ಕಾರ ಅಭ್ಯಾಸ :-

ಸಾಂಪ್ರದಾಯಿಕವಾಗಿ ಹಿಂದೂ ಧರ್ಮದಲ್ಲಿ ಸೂರ್ಯ ನಮಸ್ಕಾರವನ್ನು ಯಾವಾಗಲೂ ಸೂರ್ಯೋದಯ (ಪೂರ್ವ) ಅಥವಾ ಸೂರ್ಯಾಸ್ತದ (ಪಶ್ಚಿಮ) ದಿಕ್ಕಿನಲ್ಲಿ ಮುಖಮಾಡಿ ನಡೆಸಲಾಗುತ್ತದೆ...

ಕೆಲವು ಸಂಪ್ರದಾಯಗಳಲ್ಲಿ, 12 ಸೂರ್ಯ ನಮಸ್ಕಾರಗಳನ್ನು ಒಂದು ಅಭ್ಯಾಸದಲ್ಲಿ ನಡೆಸಲಾಗುತ್ತದೆ. ಮೊದಲ ಬಾರಿಗೆ ಅಭ್ಯಾಸವು ಪ್ರಾರಂಭವಾಗಿದ್ದರೆ, ಅದು ಸಾಮಾನ್ಯವಾಗಿ ದಿನಕ್ಕೆ (3 ರಿಂದ 6) ಕಡಿಮೆ ನಮಸ್ಕಾರಗಳನ್ನು ಪ್ರಾರಂಭಿಸಬೇಕು, ತದನಂತರ ಕ್ರಮೇಣ ಒಂದು ವಾರದ ಮೇಲೆ ಪ್ರತಿ ಸಲ 12 ನಮಸ್ಕಾರಗಳಿಗೆ ಹೆಚ್ಚಿಸಬಹುದು..ಹೆಚ್ಚಿನ ಯೋಗಾಸನದ ಹಾಗೆ ಸೂರ್ಯ ನಮಸ್ಕಾರವನ್ನೂ  ಖಾಲಿ ಹೊಟ್ಟೆಯಲ್ಲಿ ನಿರ್ವಹಿಸಬೇಕು. ಆದ್ದರಿಂದ ಆಹಾರ ನಂತರ ನಮಸ್ಕಾರದ ಮೊದಲು ಕನಿಷ್ಠ ಎರಡು ಗಂಟೆಗಳ ಅಂತರ ಇರಬೇಕು... 

ಸೂರ್ಯ ನಮಸ್ಕಾರವನ್ನು ಒಂದು ಚಾಪೆ ಅಥವಾ ವಸ್ತ್ರದ ಮೇಲೆ ನಡೆಸಬೇಕು.. ಖಾಲಿ ನೆಲದ ಮೇಲೆ ನಡೆಸಬಾರದು..ಮತ್ತು ಅಭ್ಯಾಸದ ಕೊನೆಯಲ್ಲಿ ಶವಾಸನವನ್ನು  ಆಚರಿಸಬೇಕು...

ಪ್ರತಿ ಸೂರ್ಯ ನಮಸ್ಕಾರದ ಆರಂಭದಲ್ಲಿ ಮಂತ್ರಗಳನ್ನುಉಚ್ಚರಿಸಲಾಗುತ್ತದೆ.ಇದರಲ್ಲಿ ಒಟ್ಟು 8 ವಿವಿಧ ಭಂಗಿಗಳು, ಸರಣಿಯಲ್ಲಿ 12 ನಿಲುವು ಬದಲಾವಣೆಗಳು ಇವೆ...


ಉಪಯೋಗಗಳು :-

ಸೂರ್ಯ ನಮಸ್ಕಾರದ ಜೊತೆಗೆ ಪ್ರಾಣಾಯಾಮಗಳು ಕೂಡ ಸೇರಿವೆ, ಹಾಗಾಗಿ ಇದು ಅನೇಕ ವಿಧಗಳಲ್ಲಿ ಉಪಯುಕ್ತವಾಗಿದೆ...

★ ನಿಯಮಿತವಾಗಿ ಸೂರ್ಯ ನಮಸ್ಕಾರ ಮಾಡುವುದರಿಂದ ಒತ್ತಡವನ್ನು ಸುಲಭವಾಗಿ ಕಡಿಮೆ ಮಾಡಬಹುದು ಮತ್ತು ನಿಮ್ಮ ಏಕಾಗ್ರತೆ ಮಟ್ಟವನ್ನು ಹೆಚ್ಚಿಸುವುದರ ಜೊತೆಗೆ ನಿಮ್ಮ ಮನಸ್ಸಿಗೆ ಶಾಂತಿ ನೀಡುತ್ತದೆ..

★ ಮುಂಜಾನೆ ಬೇಗ ಏಳುವುದು ಆರೋಗ್ಯದ ದೃಷ್ಟಿಯಿಂದ ಹಿತಕಾರಿ ಅನ್ನುವುದಕ್ಕೆ ಸಾಕಷ್ಟು ವಿಜ್ಞಾನಿಕ ಕಾರಣಗಳಿದ್ದರೂ ಅದಕ್ಕೂ ಮಿಗಿಲಾಗಿ ಮುಂಜಾನೆಯ ಪ್ರಶಾಂತ ಹಾಗೂ ಸುಂದರ ವಾತಾವರಣವನ್ನು ಅನುಭವಿಸುತ್ತ ಆ ಸಂದರ್ಭದಲ್ಲಿ  ಸೂರ್ಯ ನಮಸ್ಕಾರ, ಧ್ಯಾನ, ಜಪ ತಪಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಆರೋಗ್ಯದ ದೃಷ್ಟಿಯಿಂದ ಗರಿಷ್ಟ ಲಾಭವಿದೆ...

ಸೂರ್ಯ ನಮಸ್ಕಾರದ ಮಹತ್ವ :-

ಶಾರೀರಿಕ ಮಾನಸಿಕ ಮತ್ತು ಆದ್ಯಾತ್ಮಿಕ ಆರೋಗ್ಯವನ್ನು ಸುಸ್ತಿತಿಯಲ್ಲಿ ಇಟ್ಟುಕೊಳ್ಳಲು ನೆರವಾಗುವ ಪುರಾತನ ಭಾರತೀಯ ವ್ಯಾಯಾಮಗಳಲ್ಲಿ ಅತ್ಯಂತ ಮಹತ್ವದ ಸ್ಥಾನ ಪಡೆದಿರುವುದು ಸೂರ್ಯ ನಮಸ್ಕಾರ.ಇದಕ್ಕೆ ವೇದ ಕಾಲದಿಂದಲೂ ತನ್ನದೇ ಆದ ಮಹತ್ವವಿದೆ.ಇದನ್ನು ವ್ಯಾಯಾಮ ಎಂದಷ್ಟೇ ಕರೆಯದೆ ಪ್ರಾರ್ಥನೆ ಮತ್ತು ನಮಸ್ಕಾರದ ಪಟ್ಟಿಯಲ್ಲಿ ಇದು ಬರುತ್ತದೆ. ಹೀಗಾಗಿ ಹಿರಿಯರು ದೈನಂದಿನ ಚಟುವಟಿಕೆಯ ಒಂದು ಭಾಗವಾಗಿ ಇದನ್ನು ಸ್ವೀಕರಿಸಿದ್ದಾರೆ...

ಹಠಯೋಗದಲ್ಲಿ ಸೂರ್ಯ ನಮಸ್ಕಾರದ ಪ್ರಸ್ತಾಪವಿದ್ದು ಇದೊಂದು ಹನ್ನೆರಡು ಯೋಗಾಸನಗಳ ಒಂದು ಚಕ್ರ. ಸೂರ್ಯ ದೇವನಿಗೆ ಸಂಬಂಧಿಸಿದ ಬೀಜ ಮಂತ್ರವನ್ನು ಉಚರಿಸುತ್ತ ಪ್ರಾಣಾಯಾಮದ ರೀತಿಯಲ್ಲಿ ಉಸಿರನ್ನೆಳೆದುಕೊಂಡು ಅದನ್ನು ಬಿಗಿ ಹಿಡಿದುಕೊಂಡು ಮತ್ತೆ ಹೊರಗೆ ಬಿಡುತ್ತ ಮಾಡಬಹುದಾದ ವ್ಯಾಯಾಮವೇ ಸೂರ್ಯ ನಮಸ್ಕಾರ..ಇದರ ಪ್ರತಿಯೊಂದು ಭಂಗಿಯನ್ನು ಉಸಿರಾಟದ ಜೊತೆಗೇ ಬೆಸೆಯಲಾಗಿದೆ.ಉಸಿರಾಟದ ವಿನ್ಯಾಸಕ್ಕೆ ಅನುಗುಣವಾಗಿ ಲಯಬದ್ದ ರೀತಿಯಲ್ಲಿ ಸಂಯೋಜನೆಗೊಂಡಿರುವ ವಿಶಿಷ್ಟ ಆಸನವಾಗಿರುವ ಸೂರ್ಯ ನಮಸ್ಕಾರ ಎಲ್ಲ ಆಸನಗಳಿಂದಲೂ ಸರ್ವಶ್ರೇಷ್ಠವಾದದ್ದು...


ಧಾರ್ಮಿಕ ನಂಬಿಕೆ :-

ಸೂರ್ಯ ನಮಸ್ಕಾರದಿಂದ ಪುಣ್ಯ ಪ್ರಾಪ್ತಿಯಾಗುತ್ತದೆ,ಗೋ ದಾನದ ಫಲವೂ ಇದೆ ಎಂದು ಹೇಳಿ ಇದಕ್ಕೆ ಧಾರ್ಮಿಕ ನಂಬಿಕೆಯನ್ನು ನೀಡಿ ಇದನ್ನು ನಿತ್ಯವೂ ಮಾಡುವಂತೆ ಪ್ರೇರೇಪಿಸುತ್ತಿದ್ದರು.ಹಾಗಾಗಿ ಸೂರ್ಯನಿಗೆ ಅರ್ಘ್ಯ ಕೊಡುವುದು ಮತ್ತು ಮಂತ್ರ ಸ್ತೋತ್ರ ಗಳೊಂದಿಗೆ ಆತನನ್ನು ಸ್ತುತಿಸುವುದು ಧಾರ್ಮಿಕ ಆಚರಣೆಯ ಅಂಗವಾಗಿ ಬೆಳೆದು ಬಂದಿದೆ.ಧಾರ್ಮಿಕ ಆಚರಣೆಗಳೆಲ್ಲವನ್ನು ಬದಿಗಿಟ್ಟು ನೋಡಿದರೂ ಸೂರ್ಯ ನಮ್ಮ ಆರೋಗ್ಯವನ್ನು ವ್ರದ್ದಿಸುವ ಜೀವಸತ್ವಗಳ ಗಣಿ.

ದೇಹಕ್ಕೆ ಅವಶ್ಯಕವಾದ "ಡಿ"ಜೀವಸತ್ವವನ್ನು ಉತ್ಪಾದಿಸುವ ಏಕೈಕ ಮೂಲ ಸೂರ್ಯ."ಡಿ"ಜೀವಸತ್ವದ ಕೊರತೆಯುಂಟಾದಾಗ ಹೃದ್ರೋಗ, ಕ್ಷಯ, ಕ್ಯಾನ್ಸರ್ ಸೇರಿದಂತೆ ಅನೇಕ ಕಾಯಿಲೆಗಳು ಬಾಧಿಸುವ ಸಾಧ್ಯತೆಗಳಿವೆ. ಮುಂಜಾನೆಯ ಸೂರ್ಯಕಿರಣಗಳೊಂದಿಗೆ ಮಾಡುವ ಸೂರ್ಯ ನಮಸ್ಕಾರವು ದೇಹದ ರಕ್ತ ಸಂಚಾರವನ್ನು ಸುಲಲಿತಗೊಳಿಸಿ ರಕ್ತದೊತ್ತಡ ಹಾಗೂ ಕೊಬ್ಬನ್ನು ನಿಯಂತ್ರಿಸುತ್ತದೆ...

ಇದಕ್ಕೂ ಮಿಗಿಲಾಗಿ ತನು ಮನಕ್ಕೆ ಚೈತನ್ಯ ತುಂಬುವ ಉಚಿತ ಔಷಧಿ ಎಂದರೆ ಸೂರ್ಯನ ಬೆಳಕು. ಕತ್ತಲಲ್ಲಿ ಇರುವ ಗಿಡ, ಮರ, ಬಳ್ಳಿಗಳು ಕೂಡಾ ಸೂರ್ಯನ ಬೆಳಕಿಗೆ ಕತ್ತು ಚಾಚುತ್ತವೆ. ಬೆಳಕಿನೆಡೆಗೆ ಬಾಗುತ್ತವೆ.ಸೂರ್ಯನ ಬೆಳಕಿನ ಕೊರತೆ ಮನುಷ್ಯನ ಖಿನ್ನತೆಗೆ ಕಾರಣ ವಾಗುವುದಲ್ಲದೆ ಜೀವನದಲ್ಲಿ ಬೇಸರ ಜಿಗುಪ್ಸೆ ಹುಟ್ಟಿಸಬಲ್ಲದು, ಇದನ್ನು ತಪ್ಪಿಸಲು ಮುಂಜಾನೆಯ ಹಾಗೂ ಸಾಯಂಕಾಲದ ಬಿಸಿಲಿಗೆ ಮೈಒಡ್ಡುವುದು ಪ್ರಯೋಜನಕಾರಿ ಅಂತಾರೆ ವಿಜ್ಞಾನಿಗಳು...ಸೂರ್ಯ ನಮಸ್ಕಾರದಲ್ಲಿ 12 ಆಸನಗಳಿಗೆ. ಈ ಆಸನಗಳನ್ನು ಮಾಡುವ ವಿಧಾನ ಮತ್ತು ಶ್ಲೋಕಗಳು...

 1. ಓಂ ಹ್ರಾಂ ಮಿತ್ರಾಯ ನಮಃ ಕಾಲುಗಳನ್ನು ಹತ್ತಿರ ತಂದು ನೇರವಾಗಿ ನಿಲ್ಲಬೇಕು. ನಿಮ್ಮ ಕೈಗಳನ್ನು ನೇರವಾಗಿ ಮೇಲೆತ್ತಿ ಹಾಗೇ ಮುಂದುವರಿದು ನೇರವಾಗಿ ನಿಮ್ಮ ಮುಖಕ್ಕೆ ಎದುರಾಗುವಂತೆ ಮಾಡಬೇಕು. ಕೈಗಳನ್ನು ನಮಸ್ಕಾರ ಮಾಡುವ ರೀತಿಯಲ್ಲಿ ಜೋಡಿಸಿ ಹಿಡಿಯಬೇಕು. 

2. ಓಂ ಹ್ರೀಂ ರವಯೇ ನಮಃ ಶ್ವಾಸ ಒಳಗೆ ಎಳೆದುಕೊಳ್ಳುವುದರೊಂದಿಗೆ ನಿಮ್ಮ ಕಿವಿಗಳಿಗೆ ತಗಲುವಂತೆ ಕೈಗಳನ್ನು ಮೇಲಕ್ಕೆತ್ತಿ. ನಂತರ ನಿಧಾನವಾಗಿ ಬಾಗಿ ನಿಮ್ಮ ತೋಳುಗಳನ್ನು ತಲೆಯಿಂದ ಹಿಂದಕ್ಕೆ ತೆಗೆದುಕೊಳ್ಳಬೇಕು. 

3. ಓಂ ಹ್ರೂಂ ಸೂರ್ಯಾಯ ನಮಃ ಶ್ವಾಸವನ್ನು ಹೊರಗೆ ಬಿಡುತ್ತಾ ಮುಂದಕ್ಕೆ ಬಾಗಿ ಎರಡು ಕೈಗಳಿಂದ ನಿಮ್ಮ ಪಾದದ ಬೆರಳುಗಳನ್ನು ಮುಟ್ಟಿ ಹಾಗೇ ಕೆಲ ನಿಮಿಷಗಳ ಕಾಲ ಅದೇ ಸ್ಥಿತಿಯಲ್ಲಿರಲು ಪ್ರಯತ್ನಿಸಿ. ಇದು ಪಾದ ಪಶ್ಚಿಮೋತ್ಥಾನಾಸನ. 

4. ಓಂ ಹ್ರೈಂ ಭಾನವೇ ನಮಃ ಶ್ವಾಸ ಒಳಗೆಳೆದುಕೊಳ್ಳುತ್ತಾ ಬಲಗಾಲು ಹಿಂದೆ ಇಟ್ಟು ಕಾಲು ಮತ್ತು ಕೈಗಳನ್ನು ಭೂಮಿಯ ಮೇಲೆ ಊರಲು ಪ್ರಯತ್ನಿಸಿ. ಇದೇ ಸ್ಥಿತಿಯಲ್ಲಿ ಕೆಲ ಸೆಕೆಂಡು ಕಳೆಯಬೇಕು. 5. ಓಂ ಹ್ರೌಂ ಖಗಾಯ ನಮಃ ಶ್ವಾಸ ಹೊರಗೆ ಬಿಡುತ್ತಾ ಕಾಲುಗಳನ್ನು ನೇರವಾಗಿಸಿ, ಕೈಗಳನ್ನು ನೇರವಾಗಿಡಬೇಕು. ನಂತರ ಹಿಂಗಾಲನ್ನು ಎತ್ತಿ ಅದರ ಜೊತೆಗೆ ನೇರವಾಗಿ ಕೈಗಳನ್ನು ತಲೆಯ ಹಿಂಭಾಗಕ್ಕೆ ತನ್ನಿ. 

6. ಓಂ ಹ್ರಃ ಪೂಷ್ಣೇ ನಮಃ ನೆಲದ ಮೇಲೆ ಬೋರಲಾಗಿ ಮಲಗಿ ಶ್ವಾಸವನ್ನು ಒಳಗೆ ಎಳೆದುಕೊಳ್ಳುತ್ತಾ ಪಾದ, ಮೊಣಕಾಲು ಎದೆ ಮತ್ತು ಹಣೆ ನೆಲಕ್ಕೆ ನಿಧಾನವಾಗಿ ತಾಗುವಂತೆ ಮಾಡಿ ಹಿಂಗಾಲನ್ನು ನೆಲಕ್ಕಿಂತ ಸ್ವಲ್ಪ ಮೇಲಕ್ಕೆತ್ತಿ ಶ್ವಾಸ ಹೊರಗೆ ಬಿಡಬೇಕು.


 7. ಓಂ ಹ್ರಾಂ ಹಿರಣ್ಯಗರ್ಭಾಯ ನಮಃ ಶ್ವಾಸ ಹೊರಗೆಳೆದುಕೊಳ್ಳುತ್ತಾ ನಿಧಾನವಾಗಿ ದೇಹವನ್ನು ಆದಷ್ಟು ಹಿಂದಕ್ಕೆ ಬಾಗಿಸಿ. ಇದನ್ನು ಭುಜಂಗಾಸಾನ ಎಂದು ಕರೆಯುತ್ತಾರೆ. 

8. ಓಂ ಹ್ರೀಂ ಮರೀಚಯೇ ನಮಃ ಶ್ವಾಸ ನಿಧಾನವಾಗಿ ಹೊರಗೆ ಬಿಡುತ್ತಾ ಕೈಗಳನ್ನು ನೇರವಾಗಿಟ್ಟು ಸೊಂಟವನ್ನು ಮೇಲಕ್ಕೆತ್ತಿ ತಲೆಯನ್ನು ಮೇಲ್ಮುಖ ಮಾಡುತ್ತಾ ಕೈಗಳನ್ನು ಹಿಂದಕ್ಕೆ ತೆಗೆಯಬೇಕು. 

9. ಓಂ ಹ್ರೂಂ ಆದಿತ್ಯಾಯ ನಮಃ ನಿಧಾನವಾಗಿ ಶ್ವಾಸ ಒಳಗೆಳೆದುಕೊಳ್ಳುತ್ತಾ ಬಲಗಾಲಿನ ಮೊಣಕಾಲನ್ನು ಮುಂದಕ್ಕೆ ಇಡುತ್ತಾ ತಲೆಯನ್ನು ಆದಷ್ಟು ಮೇಲೆತ್ತಬೇಕು. 

10. ಓಂ ಹ್ರೈಂ ಸವಿತ್ರೇ ನಮಃ ನಿಧಾನವಾಗಿ ಶ್ವಾಸ ಹೊರಗೆ ಬಿಡುತ್ತಾ ಕಾಲುಗಳು ನೇರ, ಕೈಗಳು ಪಾದದ ಬೆರಳುಗಳನ್ನು ಮುಟ್ಟುತ್ತಿದ್ದು ತಲೆ ಮೊಣಕಾಲಿಗೆ ತಗುಲಿರಬೇಕು. 

11. ಓಂ ಹ್ರೌಂ ಅರ್ಕಾಯ ನಮಃ ನಿಧಾನವಾಗಿ ಶ್ವಾಸ ಒಳಗೆಳೆದುಕೊಳ್ಳುತ್ತಾ ಕೈಗಳನ್ನು ಮೇಲಕ್ಕೆತ್ತಿ ನಿಧಾನವಾಗಿ ಹಿಂದಕ್ಕೆ ಭಾಗಿ ಕೈಗಳನ್ನು ತಲೆಯ ಹಿಂಭಾಗಕ್ಕೆ ತನ್ನಿ. ನಮಸ್ಕಾರದ ಸ್ಥಿತಿಗೆ ಬನ್ನಿ. 

12. ಓಂ ಹ್ರಃ ಭಾಸ್ಕರಾಯ ನಮಃ ಈಗ ಸಾಮಾನ್ಯ ಸ್ಥಿತಿಗೆ ಬನ್ನಿ.  ಈ ರೀತಿ ಮಾಡಿದರೆ ಒಂದು ಸುತ್ತಿನ ಸೂರ್ಯ ನಮಸ್ಕಾರ ಮಾಡಿದಂತಾಯಿತು. ನಂತರ ಎಡಗಾಲಿನಿಂದ ಈ ಹಂತಗಳನ್ನು ಪುನರಾವರ್ತಿಸಬೇಕು...ಪ್ರಸ್ತುತ ದಿನಗಳಲ್ಲಿ ಸೂರ್ಯ ನಮಸ್ಕಾರ :-

2004ರಲ್ಲಿ ಮದ್ಯಪ್ರದೇಶದ ಗ್ವಾಲಿಯರ್ನಲ್ಲಿ 180 ಶಾಲೆಗಳ ಸುಮಾರು 15,000 ಕ್ಕೂ ಹೆಚ್ಹಿನ ಮಕ್ಕಳು ಏಕಕಾಲಕ್ಕೆ ಸೂರ್ಯ ನಮಸ್ಕಾರ ಮಾಡಿ ವಿಶ್ವ ದಾಖಲೆ ಮಾಡಿ ಸೂರ್ಯ ನಮಸ್ಕಾರದ ಮಹತ್ವವನ್ನು ಸಾಬೀತು ಪಡಿಸಿದ್ದಾರೆ.. ಅಮೆರಿಕಾದ "ಹಿಂದೂ ಸ್ವಯಂ ಸೇವಾ ಸಂಘ ""ಹೆಲ್ತ್ ಫಾರ್ ಹ್ಯುಮಾನಿಟಿ ಯೋಗತಾನ್"ಕಾರ್ಯಕ್ರಮದ ಅಂಗವಾಗಿ 2011ರ ಜನವರಿ ತಿಂಗಳಲ್ಲಿ ಕ್ಯಾಲಿಪೋರ್ನಿಯಾದಲ್ಲಿ ಆಯೋಜಿಸಿದ್ದ ಸಾಮೂಹಿಕ ಸೂರ್ಯ ನಮಸ್ಕಾರದಲ್ಲಿ 17 ಶಾಲೆಗಳು, 25 ವಿಶ್ವ ವಿದ್ಯಾಲಯಗಳು, 14 ಯೋಗ ಕೇಂದ್ರಗಳಲ್ಲದೆ ಹಲವಾರು ದೇಗುಲ ಸಮಿತಿಗಳು ಸಕ್ರೀಯವಾಗಿ ಭಾಗವಹಿಸಿರುವುದು ಸೂರ್ಯನಮಸ್ಕಾರದ ಮಹತ್ವ ಮತ್ತು ಜನಪ್ರಿಯತೆಯನ್ನು ಸಾರುತ್ತದೆ...

ಆರೋಗ್ಯ ಕುರಿತ ಕಾಳಜಿಯೊಂದಿಗೆ ನ್ಯೂಯಾರ್ಕಿನ ಮೇಯರ್ "ಮಿಷೆಲ್ ಬ್ಲುವತ್ ಬರ್ಗ್ "ಯೋಗತಾನ್ ಅನ್ನು ಸಂಘಟಿಸಿ ಸಾರ್ವಜನಿಕರನ್ನು ಸಕ್ರೀಯವಾಗಿ ಭಾಗವಹಿಸುವಂತೆ ಕೋರಿದ್ದರು.ಸಾರ್ವಜನಿಕರೊಂದಿಗೆ ಗಣ್ಯಾತಿಗಣ್ಯರು ಸಾಮೂಹಿಕ ಸೂರ್ಯ ನಮಸ್ಕಾರದಲ್ಲಿ ಅತ್ಯದಿಕ ಸಂಖ್ಯೆಯಲ್ಲಿ ಭಾಗವಹಿಸಿ ದಾಖಲೆ ನಿರ್ಮಿಸಿದ್ದರು...


ಒಟ್ಟಿನಲ್ಲಿ ಆರೋಗ್ಯ ವೃದ್ಧಿ ಹಾಗೂ ಮನೋಬಲವನ್ನು ಹೆಚಿಸುವುದಕ್ಕೆ ನೆರವಾಗುವ ಸೂರ್ಯ ನಮಸ್ಕಾರವು  ಬದಲಾವಣೆ ತರುವುದಲ್ಲದೆ ರೋಗ ಪ್ರತಿರೋದಕ ಶಕ್ತಿ, ಸಾಮರ್ಥ್ಯ ಮತ್ತು ಜೀವನಾಸಕ್ತಿಯನ್ನು ಹೆಚ್ಚಿಸುತ್ತದೆ.ಅನ್ನುವುದು ಅನುಭವದ ಮಾತು. ಒಟ್ಟಿನಲ್ಲಿ ವ್ಯಕ್ತಿತ್ವದ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿರುವ ಸೂರ್ಯ ನಮಸ್ಕಾರವು ಜಾತಿ ಮತ ಪಂಥಗಳನ್ನು ಮೀರಿ ಎಲ್ಲಾ ವಯೋಮಾನದ ಜನರಿಗೂ ಅನ್ವಯವಾಗುವಂಥ ಒಂದು ವಿಶಿಷ್ಟಪೂರ್ಣ ವ್ಯಾಯಾಮವಾಗಬೇಕು.. ಬದಲಾಗುತ್ತಿರುವ ಜೀವನ ಶೈಲಿಯಲ್ಲಿ ಸುಧಾಕರನ ಆಧರಣೆ  ಎಲ್ಲರಿಗೂ ಸಿಗಬೇಕು...


 -  ಲವೀನಾ ಸೋನ್ಸ್

 

Like our news?