ಆಷಾಢ ಏಕಾದಶಿಯ ಮಹತ್ವವೇನು ಗೋತ್ತಾ..! #BD1News #Kannada #Special #Article

Tue, Jul 20, 2021

ಚಾತುರ್ಮಾಸದ ಆರಂಭದ ದೇವಶಯನಿ (ಆಷಾಢ) ಏಕಾದಶಿಯ ಮಹತ್ವ...


ವರ್ಷದ ಇಪ್ಪತ್ನಾಲ್ಕು ಏಕಾದಶಿಗಳಲ್ಲಿ ಆಷಾಢ ಏಕಾದಶಿಯ ಮಹತ್ವ ಆಷಾಢ ಏಕಾದಶಿಯ ತಿಥಿಯಂದು ಏಕಾದಶೀದೇವಿಯ ಉತ್ಪತ್ತಿಯಾಯಿತು. ಈ ತಿಥಿಯಂದು ಚಾತುರ್ಮಾಸವು ಪ್ರಾರಂಭವಾಗುತ್ತದೆ. ಇದೇ ದಿನ ಶ್ರೀವಿಷ್ಣು ಕ್ಷೀರಸಾಗರದಲ್ಲಿ ಯೋಗನಿದ್ರೆಯಲ್ಲಿ ಲೀನನಾಗುತ್ತಾನೆ. ಇದೇ ತಿಥಿಗೆ ಶ್ರೀ ವಿಠ್ಠಲನು ಭಕ್ತ ಪುಂಡಲೀಕನನ್ನು ಭೇಟಿಯಾಗಲು ಪಂಢರಪುರಕ್ಕೆ ಬಂದನು.

ಇತರ ಅಂಶಗಳು...

ಆಷಾಢ ಏಕಾದಶಿಯು ಕಾಲಕ್ಕೆ ಸಂಬಂಧಿಸಿದೆ. ಆಷಾಢ ಶುಕ್ಲ ಏಕಾದಶಿಯಿಂದ ಕಾರ್ತಿಕ ಶುಕ್ಲ ಏಕಾದಶಿ ಈ ನಾಲ್ಕು ತಿಂಗಳುಗಳಲ್ಲಿ ದಕ್ಷಿಣಾಯನವು ನಡೆಯುತ್ತಿರುತ್ತದೆ. ಆದ್ದರಿಂದ ಈ ಕಾಲಾವಧಿಯು ದೇವತೆಗಳ ನಿದ್ರೆಯ ಕಾಲಾವಧಿಯಾಗಿದೆ ಎಂದು ಹೇಳುತ್ತಾರೆ. ಈ ಕಾಲಾವಧಿಯಲ್ಲಿ ದೇವತೆಗಳ ತತ್ತ್ವಗಳ ಸಗುಣ-ನಿರ್ಗುಣ ತತ್ತ್ವಗಳ ಸ್ಪಂದನಗಳ ಪ್ರಕ್ಷೇಪಣೆಯ ಕಾರ್ಯವು ಅಪ್ರಕಟ ಸ್ವರೂಪದಲ್ಲಿರುತ್ತದೆ.


ಆದುದರಿಂದ ಭೂಮಂಡಲದ ಕಡೆಗೆ ಅವುಗಳ ಪ್ರಕ್ಷೇಪಣೆಯ ಪ್ರಮಾಣವು ಕಡಿಮೆಯಿರುತ್ತದೆ. ಈ ಕಾಲಾವಧಿಯಲ್ಲಿ ದೇವತೆಗಳ ತತ್ತ್ವಗಳು ಅಪ್ರಕಟ ಸ್ವರೂಪದಲ್ಲಿರುವುದರಿಂದ ವಾಯುಮಂಡಲ ಮತ್ತು ಬ್ರಹ್ಮಾಂಡ ಮಂಡಲಗಳಲ್ಲಿ, ಹಾಗೆಯೇ ಭೂಮಿಯ ಮೇಲೆ ಅಸುರೀ ಶಕ್ತಿಗಳ ಪ್ರಾಬಲ್ಯವು ಹೆಚ್ಚಾಗುತ್ತದೆ. ಇದರ ಪರಿಣಾಮವು ಭೂಮಿಯ ಮೇಲಿನ ಸಜೀವ ಸೃಷ್ಟಿಯ ಮೇಲೂ ಆಗುತ್ತದೆ. ಆಷಾಢ ಶುಕ್ಲ ಏಕಾದಶಿಯಂದು ಉಪವಾಸ, ಪೂಜಾವಿಧಿ, ವ್ರತ ಮುಂತಾದವುಗಳನ್ನು ಮಾಡುವುದರಿಂದ ಜೀವದ ಮೇಲಾಗುವ ಕೆಟ್ಟ ಶಕ್ತಿಗಳ ಆಕ್ರಮಣಗಳ ಪ್ರಮಾಣವು ಕಡಿಮೆಯಾಗುತ್ತದೆ. ಆಷಾಢ ಶುಕ್ಲ ಏಕಾದಶಿಯ ದಿನ ಶ್ರೀವಿಷ್ಣುವಿಗೆ ಪಾರ್ಥನೆ ಮತ್ತು ಅವನನ್ನು ಪೂಜಿಸುವುದರಿಂದ, ಹಾಗೆಯೇ ಇಡೀರಾತ್ರಿ ಅವನ ಎದುರಿಗೆ ತುಪ್ಪದ ದೀಪವನ್ನು ಹಚ್ಚುವುದರಿಂದ ಕೆಟ್ಟ ಶಕ್ತಿಗಳಿಂದ ವಾಸ್ತುವಿನ ರಕ್ಷಣೆಯಾಗುತ್ತದೆ.’

ಇಷ್ಟೆಲ್ಲ ವೈಶಿಷ್ಟ್ಯವಿರುವ ಆಷಾಢ ಏಕಾದಶಿ ಇವತ್ತು. ಆಷಾಢ ಏಕಾದಶಿಯನ್ನು ಆಚರಿಸಿ ಭಗವಂತನ ಕೃಪೆಗೆ ಪಾತ್ರರಾಗೋಣ.

ವರದಿ : ನೀಲಕಂಠ ವಿಜಯಪುರ...

Like our news?