ಹೈದರಾಬಾದ್[ಸೆ.25]: ಮರ್ಯಾದಾ ಹತ್ಯೆಯಿಂದ ಪತಿಯನ್ನು ಕಳೆದುಕೊಂಡ ತೆಲಂಗಾಣದ ನೆಲಗೊಂಡದ ಮಿರ್ಯಾಲಾಗುಡ ಪಟ್ಟಣದ 21 ವರ್ಷದ ಅಮೃತ ವರ್ಷಿಣಿ ತನ್ನ ಜೀವನಕ್ಕೆ ಹಣ, ಆಸ್ತಿ ಏನು ಬೇಡ ಗಂಡನನ್ನು ಕೊಂದ ತನ್ನ ತಂದೆಯನ್ನು ನೇಣಿಗೇರಿಸಿ ಎಂದು ಸರ್ಕಾರವನ್ನು ಆಗ್ರಹಿಸಿದ್ದಾಳೆ.
ಮೇಲ್ಜಾತಿ ಕುಟುಂಬದ ಅಮೃತ ಕುಟುಂಬದ ವಿರೋಧದ ನಡುವೆ ದಲಿತ ಕ್ರೈಸ್ತ ಸಮುದಾಯದ ಯುವಕ 23 ವರ್ಷದ ಪ್ರಣಯ್ ಅವರನ್ನು ಪ್ರೇಮಿಸಿ ಈ ವರ್ಷದ ಜನವರಿ 30 ರಂದು ವಿವಾಹವಾಗಿದ್ದರು. ರಿಯಲ್ ಎಸ್ಟೇಟ್ ಉದ್ಯಮಿಯಾದ ತಂದೆ ಕೆ. ಮಾರುತಿ ರಾವ್ ವಿವಾಹಕ್ಕೆ ವಿರೋಧ ವ್ಯಕ್ತಪಡಿಸಿದ್ದರು.
ಕೆಳ ಜಾತಿ ಯುವಕನನ್ನು ವರಿಸಿದ್ದಕ್ಕೆ ಕತ್ತಿ ಮಸಿಯುತ್ತಲೆ ಬಂದಿದ್ದ ಮಾರುತಿ ರಾವ್ ಸಹಚರರ ಮೂಲಕ ಹಲವು ಬಾರಿ ಕೊಲೆಗೆ ಪ್ರಯತ್ನಿಸಿದ್ದ. ಕಳೆದ ಸೆ.14 ರಂದು ಗರ್ಭವತಿಯಾಗಿದ್ದ ಅಮೃತಾಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಮಾರುತಿ ರಾವ್ ನೇಮಿಸಲ್ಪಟ್ಟ ಬಿಹಾರದ ಸುಪಾರಿ ಹಂತಕ ಹಿಂದಿನಿಂದ ಬಂದು ಮಚ್ಚಿನಿಂದ ಹಲ್ಲೆ ನಡೆಸಿ ಭೀಕರವಾಗಿ ಕೊಲೆ ಮಾಡಿದ್ದ. ಹಂತಕರಿಗೆ 1 ಕೋಟಿ ಸುಫಾರಿ ನೀಡಿ 15 ಲಕ್ಷ ಮುಂಗಡ ನೀಡಿದ್ದ ಮಾರುತಿ ರಾವ್.
ತಂದೆ ಮಾರುತಿ ರಾವ್ ಸೇರಿದಂತೆ ಕೊಲೆಯಲ್ಲಿ ಭಾಗಿಯಾದವರನ್ನು ಈಗಾಗಲೇ ಬಂಧಿಸಲಾಗಿದೆ. ಬಿಹಾರ ಮೂಲದ ಹಂತಕರಿಗೆ ಐಎಸ್ಐ ಸಂಪರ್ಕವಿದೆ ಎಂದು ಸ್ಥಳೀಯ ಪೊಲೀಸರು ಶಂಕಿಸಿದ್ದಾರೆ. ಪತಿಯನ್ನು ಕಣ್ಣ ಮುಂದೆಯೇ ಕೊಲೆಮಾಡಿಸಿರುವ ಜನ್ಮ ನೀಡಿದ ತಂದೆಯನ್ನು ಉಗ್ರವಾಗಿ ದ್ವೇಷಿಸುತ್ತಿರುವ ಅಮೃತ ಶೀಘ್ರ ವಿಚಾರಣೆ ನಡೆಸಿ ಗಲ್ಲು ಶಿಕ್ಷೆಗೆ ಒಳಪಡಿಸಬೇಕೆಂದು ಆಗ್ರಹಿಸಿದ್ದಾಳೆ.
Sign up here to get the latest post directly to your inbox.